ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮದ ವಾಸ್ತವಿಕತೆ ಅಧ್ಯಯನ ಮಾಡಲು ಜೆಡಿಎಸ್ ಬರ ಅಧ್ಯಯನ ತಂಡವು ಬುಧವಾರ ಜಿಲ್ಲೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿತು.ತಾಲೂಕಿನ ಅಗಡಿ, ಕನವಳ್ಳಿ, ಹೊಸರಿತ್ತಿ, ಹಂದಿಗನೂರ ಗ್ರಾಮಗಳ ರೈತರ ಹತ್ತಿ, ಶೇಂಗಾ, ಮೆಕ್ಕೆಜೋಳದ ಜಮೀನುಗಳಿಗೆ ಭೇಡಿ ನೀಡಿ ಹಾನಿಗೊಳಾಗದ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು.
ಈ ವೇಳೆ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಮಾತನಾಡಿ, ಭೀಕರ ಬರ ಸಂಕಷ್ಟವು ರಾಜ್ಯವನ್ನು ತೀವ್ರವಾಗಿ ಕಾಡುತ್ತಿದ್ದು, ರೈತರ ಸ್ಥಿತಿ ಶೋಚನೀಯವಾಗಿದೆ. ನದಿಗಳು ಬಹುತೇಕ ಬತ್ತಿಹೋಗಿದ್ದು ಜಲಾಶಯಗಳ ನೀರಿನ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಸಮರ್ಪಕ ವಿದ್ಯುತ್ ಕೊರತೆ, ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ, ಕೃಷಿ ಕೂಲಿಕಾರ್ಮಿಕರಿಗೆ ಕೆಲಸವಿಲ್ಲ, ದನಕರುಗಳಿಗೆ ಮೇವಿನ ಅಭಾವ ತಲೆದೂರಿದೆ. ಇಂತಹ ಸ್ಥಿತಿಯಲ್ಲಿ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರೆಸುತ್ತಿದೆ. ಇದರಿಂದ ಸಮಸ್ಯೆ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ ಎಂದರು.ಹತ್ತಾರು ಸಾವಿರ ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿವೆ. ಈ ಕೂಡಲೇ ರಾಜ್ಯ ಸರ್ಕಾರ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಬರ ಆವರಿಸಿ ತಿಂಗಳು ಉರುಳುತ್ತಿದ್ದರೂ ರೈತರಿಗೆ ನಯಾ ಪೈಸೆ ಪರಿಹಾರವಾಗಲಿ, ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಶೀಘ್ರವೇ ರಾಜ್ಯದ ರೈತರ ಪ್ರತಿ ಎಕರೆಗೆ ₹೨೫ ಸಾವಿರ ಬೆಳೆ ಪರಿಹಾರ ನೀಡಿ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ರಾಜ್ಯದ ಜನತೆ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ರಾಜ್ಯದಲ್ಲಿ ಶೇ.೭೦ರಷ್ಟು ರೈತರಿದ್ದಾರೆ ಅವರು ಸಂಕಷ್ಟಕ್ಕೆ ಬಿದ್ದಾಗ ಸರ್ಕಾರ ರೈತರ ನರವಿಗೆ ಬರಬೇಕು. ಮುಂಗಾರು ಬೆಳೆ ಸಂಪೂರ್ಣ ನಾಶವಾಗಿದ್ದು ಹಿಂಗಾರು ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ಐದು ಗ್ಯಾರಂಟಿ ಘೋಷಿಸಿದಂತೆ ಆರನೇ ಗ್ಯಾರಂಟಿಯಾಗಿ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಗುರುರಾಜ ಹುಣಸಿಮರದ, ಕೆ.ಎಸ್. ಸಿದ್ದಬಸಪ್ಪ ಯಾದವ, ರಾಜಹ್ಮದ ಜೆ.ಎ.ಪಿ ಪಠಾಣ, ಮಂಜುನಾಥ. ಗೌಡಶಿವಣ್ಣವರ, ಎಸ್.ಎಲ್. ಕಾಡದೇವರಮಠ, ಮಲ್ಲಿಕಾರ್ಜುನ ಅರಳಿ, ಅಮೀರಜಾನ ಬೇಪಾರಿ, ವೀರಭದ್ರಪ್ಪ ಅಮರಪ್ಪನವರ, ಶರಣಪ್ಪ ಹನುಮನಹಳ್ಳಿ, ಶಿವಕುಮಾರ ಅರಳಿ, ಪುಟ್ಟಪ್ಪ ಬಾರ್ಕಿ, ಧರ್ಮವ್ವ ಮರಾಠಿ, ಬಾಬುಜಾನ ಸುಂಕದ, ತಿರಕನಗೌಡ ಪಾಟೀಲ, ಅಶೋಕ ಹನುಮನಹಳ್ಳಿ, ದುರಗೇಶ ಮಡಿವಾಳರ, ಸಿದ್ದಲಿಂಗೇಶ ಹಾವಿನಾಳ, ರಾಜೇಶ ಆನಿಶೆಟ್ಟರ, ನಾಗಪ್ಪ ಮರಾಠಿ ಇತರರು ಇದ್ದರು.