ಒಂದೇ ಬೆಂಚಿನಲ್ಲಿ ಐವರು ವಿದ್ಯಾರ್ಥಿಗಳು

| Published : Nov 23 2023, 01:45 AM IST

ಸಾರಾಂಶ

ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿ ದಿನ ಅನುಭವಿಸುತ್ತಿರುವ ಪರಿಸ್ಥಿತಿ. ಇಲ್ಲಿ 8ರಿಂದ 10ನೇ ತರಗತಿವರೆಗೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 340 ಬಾಲಕರು, 336 ಬಾಲಕಿಯರು ಸೇರಿದಂತೆ ಒಟ್ಟು 676 ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ವರ್ಷ ಕೆಕೆಆರ್‌ಡಿಬಿ ಅನುದಾನದಲ್ಲಿ ಮಾಜಿ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಸುಮಾರು ಎಂಟು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು. ಅದರಲ್ಲಿ ಆರು ಕೊಠಡಿಗಳ ಶೇ.90 ಕಾಮಗಾರಿ ಮುಗಿದಿದೆ. ಎಲೆಕ್ಟ್ರಿಕಲ್‌ ಸೇರಿದಂತೆ ಸಣ್ಣಪುಟ್ಟ ಕೆಲಸ ಬಾಕಿ ಇದ್ದು, ಗುತ್ತಿಗೆದಾರರು ಪೂರ್ಣ ಮುಗಿಸಿ ಉದ್ಘಾಟನೆ ಮಾಡಿಕೊಟ್ಟರೆ ಆರು ಕೊಠಡಿಗಳನ್ನು ಉಪಯೋಗ ಮಾಡಿಕೊಳ್ಳಲು ಅನೂಕೂಲವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿಕೊಠಡಿಗಳ ಕೊರತೆಯಿಂದಾಗಿ ಒಂದು ಬೆಂಚಿನಲ್ಲಿ ಸುಮಾರು ಐವರು ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವ ಅನಿವಾರ್ಯತೆ ಎದುರಾಗಿದ್ದು, ಅಧಿಕಾರಿಗಳು, ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಇದು ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿ ದಿನ ಅನುಭವಿಸುತ್ತಿರುವ ಪರಿಸ್ಥಿತಿ. ಇಲ್ಲಿ 8ರಿಂದ 10ನೇ ತರಗತಿವರೆಗೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 340 ಬಾಲಕರು, 336 ಬಾಲಕಿಯರು ಸೇರಿದಂತೆ ಒಟ್ಟು 676 ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ.ಒಂದೇ ಬೆಂಚಿನಲ್ಲಿ ಐವರು:ಕಳೆದ ವರ್ಷ ಕೆಕೆಆರ್‌ಡಿಬಿ ಅನುದಾನದಲ್ಲಿ ಮಾಜಿ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಸುಮಾರು ಎಂಟು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು. ಅದರಲ್ಲಿ ಆರು ಕೊಠಡಿಗಳ ಶೇ.90 ಕಾಮಗಾರಿ ಮುಗಿದಿದೆ. ಎಲೆಕ್ಟ್ರಿಕಲ್‌ ಸೇರಿದಂತೆ ಸಣ್ಣಪುಟ್ಟ ಕೆಲಸ ಬಾಕಿ ಇದ್ದು, ಗುತ್ತಿಗೆದಾರರು ಪೂರ್ಣ ಮುಗಿಸಿ ಉದ್ಘಾಟನೆ ಮಾಡಿಕೊಟ್ಟರೆ ಆರು ಕೊಠಡಿಗಳನ್ನು ಉಪಯೋಗ ಮಾಡಿಕೊಳ್ಳಲು ಅನೂಕೂಲವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ಕೊಠಡಿಗಳ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಮೂವರು ಕುಳಿತುಕೊಳ್ಳುವ ಬೆಂಚಿನಲ್ಲಿ ಐವರು ವಿದ್ಯಾರ್ಥಿಗಳು ಕುಳಿತುಕೊಂಡು ಪಾಠ ಕೇಳುತ್ತಿದ್ದಾರೆ.ಕಳೆದ ವರ್ಷ ಮುದೇನೂರಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ಕೇಂದ್ರ ರದ್ದಾದ ಹಿನ್ನೆಲೆಯಲ್ಲಿ ದೋಟಿಹಾಳ ಕೇಂದ್ರಕ್ಕೆ ಮುದೇನೂರು, ಶಿರಗುಂಪಿ, ಕ್ಯಾದಿಗುಪ್ಪ, ಬಿಜಕಲ್ ಪ್ರೌಢಶಾಲೆಯ ಮಕ್ಕಳು ಪರೀಕ್ಷೆ ಬರೆಯಲು ಬರುತ್ತಿದ್ದಾರೆ. 32 ಕೊಠಡಿ ಅಗತ್ಯ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ನೂತನ ಕೊಠಡಿಗಳಲ್ಲಿ ಗ್ರೀನ್ ಬೋರ್ಡ್, ಎಲೆಕ್ಟ್ರಿಕಲ್‌ ಕೆಲಸ ಹಾಗೂ ಗೇಟ್ ನಿರ್ಮಾಣ ಮಾಡಿ ಕೊಟ್ಟರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮುಂಬರುವ ಎಸ್ಎಸ್ಎಲ್‌ಸಿ ಪರೀಕ್ಷಾ ಕೇಂದ್ರಕ್ಕೂ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಬರುವ ನಿರೀಕ್ಷೆ ಇದೆ. ಸುಮಾರು 32 ರೂಮಿನ ಅವಶ್ಯಕತೆ ಇದೆ ಎನ್ನುತ್ತಾರೆ ಶಾಲೆಯ ಉಪ ಪ್ರಾಂಶುಪಾಲ ಡಿ.ಸುರೇಶ.ಆರು ಕೊಠಡಿಗಳ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಉಳಿದ ಕೆಲಸ ಮಾಡಿಕೊಟ್ಟು ಅನುಕೂಲ ಮಾಡಿಕೊಡಲಾಗುವುದು ಎನ್ನುತ್ತಾರೆ ನಿರ್ಮಿತಿ ಕೇಂದ್ರ ಆದೇಶ ಗುಡಿಹಾಳ.

ಸಂಬಂಧಪಟ್ಟವರಿಗೆ ಸೂಚನೆ: ದೋಟಿಹಾಳ ಪ್ರೌಢಶಾಲೆಯ ನೂತನ ಕೊಠಡಿಗಳ ಕಾಮಗಾರಿ ಮುಗಿದ ನಂತರ ಉದ್ಘಾಟನೆ ಮಾಡಲಾಗುವುದು. ತ್ವರಿತಗತಿಯಲ್ಲಿ ಕಾಮಗಾರಿ ಮಾಡಲು ಸಂಬಂಧಪಟ್ಟವರಿಗೆ ಸೂಚನೆ ಕೊಡುತ್ತೇನೆ ಎನ್ನುತ್ತಾರೆ ಶಾಸಕ ದೊಡ್ಡನಗೌಡ ಪಾಟೀಲ.