ಜಮ್ಮು ಕಾಶ್ಮೀರ ಉಗ್ರರ ಎನ್‌ಕೌಂಟರ್‌: ಮಂಗಳೂರು ಮೂಲದ ಕ್ಯಾಪ್ಟನ್‌ ಹುತಾತ್ಮ

| Published : Nov 23 2023, 01:45 AM IST

ಜಮ್ಮು ಕಾಶ್ಮೀರ ಉಗ್ರರ ಎನ್‌ಕೌಂಟರ್‌: ಮಂಗಳೂರು ಮೂಲದ ಕ್ಯಾಪ್ಟನ್‌ ಹುತಾತ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ಎನ್ನ್‌ಕೌಂಟರ್ರ್‌ನಲ್ಲಿ ಮಂಗಳೂರು ಮೂಲದ ಯೋಧ ಸಾವು, ಪ್ರಾಂಜಲ್ಲ್‌ ಅವರು ಎಂಆರ್ರ್‌ಪಿಲ್ಲ್‌ನ ನಿವೃತ್ತ ಎಂಡಿ ವೆಂಕಟೇಶ್ಶ್‌ ಅವರ ಏಕೈಕ ಪುತ್ರ

ಕನ್ನಡಪ್ರಭ ವಾರ್ತೆ ಮಂಗಳೂರು

ಜಮ್ಮುು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಜಿಮಾಲ್‌ ಅರಣ್ಯದಲ್ಲಿ ಬುಧವಾರ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಇಬ್ಬರು ಸೇನಾಧಿಕಾರಿ ಹಾಗೂ ಇಬ್ಬರು ಯೋಧ ಹುತಾತ್ಮರಾಗಿದ್ದಾರೆ. ಹುತಾತ್ಮಗೊಂಡ ಇಬ್ಬರು ಸೇನಾಧಿಕಾರಿಗಳ ಪೈಕಿ ಓರ್ವರು ಮಂಗಳೂರು ಮೂಲದ ಕನ್ನಡಿಗ ಕ್ಯಾಪ್ಟನ್‌ ಎಂದು ಹೇಳಲಾಗಿದೆ.

ಮಂಗಳೂರು ರಿಫೈನರ್ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌(ಎಂಆರ್‌ಪಿಎಲ್‌) ನಿವೃತ್ತ ಎಂಡಿ ವೆಂಕಟೇಶ್‌ ಅವರ ಏಕೈಕ ಪುತ್ರ ಯೋಧ ಪ್ರಾಂಜಲ್‌ ಎಂದು ಹೆಸರಿಸಲಾಗಿದೆ.

ಅಲ್ಲಿನ ಪಿರ್‌ ಪಂಜಾಬ್‌ ದಟ್ಟಾರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ವಿಶೇಷ ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ತಂಡದಲ್ಲಿ ಕನ್ನಡಿಗ ಕ್ಯಾಪ್ಟನ್‌ ಪ್ರಾಂಜಲ್‌ ಕೂಡ ಇದ್ದರು ಎಂದು ಹೇಳಲಾಗಿದೆ. ಪ್ರಾಂಜಲ್ ಅವರು 63ನೇ ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್‌ ಆಗಿದ್ದರು. ಇನ್ನೊಬ್ಬರು ಕ್ಯಾಪ್ಟನ್‌ ಶುಭಂ.

ವೆಂಕಟೇಶ್‌ ಅವರ ಮೂಲ ಕರಾವಳಿ ಆಗಿದ್ದು, ಅವಿಭಜಿತ ದ.ಕ. ಜಿಲ್ಲೆಗೆ ಸೇರಿದವರು. ಬಳಿಕ ಮೈಸೂರಿಗೆ ತೆರಳಿ ಅಲ್ಲಿ ಸ್ವಲ್ಪ ಸಮಯ ನೆಲೆಸಿದ್ದರು. ನಿವೃತ್ತಿ ಬಳಿಕ ವೆಂಕಟೇಶ್‌ ಅವರು ಪತ್ನಿ ಜತೆ ಬೆಂಗಳೂರಿನಲ್ಲಿ ವಾಸವಿದ್ದಾರೆ. 6 ತಿಂಗಳ ಹಿಂದೆ ಆಗಮಿಸಿದ್ದ ಪುತ್ರ:

ತಂದೆ ವೆಂಕಟೇಶ್‌ ಅವರು ಎಂಆರ್‌ಪಿಎಲ್‌ನಲ್ಲಿ ಆರಂಭದಿಂದಲೇ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು. ಕೊನೆಗೆ ಎಂಡಿ ಆಗಿ 2023 ಮೇ 31ರಂದು ನಿವೃತ್ತರಾಗಿದ್ದರು. ಇವರ ನಿವೃತ್ತಿ ಸಮಾರಂಭದಲ್ಲಿ ಪುತ್ರ ಪ್ರಾಂಜಲ್‌ ಕೂಡ ಪಾಲ್ಗೊಂಡಿದ್ದರು. ಬಳಿಕ ಸೇನೆಗೆ ವಾಪಸ್‌ ಆಗಿದ್ದರು.

ಪ್ರಾಂಜಲ್‌ ಅವರು ದೆಹಲಿ ಪಬ್ಲಿಕ್‌ ಸ್ಕೂಲ್‌, ಸುರತ್ಕಲ್‌ನ ಎಂಆರ್‌ಪಿಎಲ್‌ ಸ್ಕೂಲ್‌ಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ರಾಷ್ಟ್ರಪತಿ ಸ್ಕೌಟ್‌ ಪುರಸ್ಕಾರವನ್ನೂ ಗಳಿಸಿದ್ದರು.

ಪ್ರಾಂಜಲ್‌ ವರ್ಷಕ್ಕೆ ಎರಡು ಬಾರಿ ಮಂಗಳೂರಿಗೆ ಆಗಮಿಸುತ್ತಿದ್ದರು. ಎಂಆರ್‌ಪಿಎಲ್‌ನಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವೆಂಕಟೇಶ್‌ ಅವರು ಎಂಆರ್‌ಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರಬೇಕಾದರೆ ಅಲ್ಲಿನ ಟೌನ್‌ಶಿಪ್‌ನಲ್ಲಿ ಇರುತ್ತಿದ್ದು, ಪುತ್ರ ಕೂಡ ತಂದೆ, ತಾಯಿ ಜತೆ ಊರಿಗೆ ಬಂದಾಗ ಕಾಲಕಳೆಯುತ್ತಿದ್ಡರು. ಪುತ್ರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ತುಂಬ ಹೆಮ್ಮೆ ಇದೆ ಎಂದು ವೆಂಕಟೇಶ್‌ ಆಗಾಗ ಹೇಳುತ್ತಿದ್ದರು ಎಂದು ಅವರ ಸಹೋದ್ಯೋಗಿ ಸಿಬ್ಬಂದಿ ನೆನಪಿಸುತ್ತಾರೆ.