ಕೊಪ್ಪಳ: ಅಂತೂ, ಇಂತು ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ಗಾಳಿ ಬೀಸಲಾರಂಭಿಸಿದೆ. ಕಂದಮ್ಮಗಳು ಫ್ಯಾನ್ ಗಾಳಿಯಿಂದ ನಿಟ್ಟುಸಿರು ಬಿಟ್ಟಿವೆ. ಇತರೆ ರೋಗಿಗಳಿಗೂ ಬಿಸಿಲಿನ ತಾಪ ನೀಗಿಕೊಳ್ಳಲು ಗಾಳಿ ಬೀಸುತ್ತಿದೆ. ಇದಕ್ಕಿಂತ ಮಿಗಿಲಾಗಿ ಬಾಯಾರಿಕೆ ತೀರಿಸಿಕೊಳ್ಳಲು ಆಸ್ಪತ್ರೆಯ ನಲ್ಲಿಯಲ್ಲಿ ನೀರೂ ಬಂದಿದೆ.

ಇದೆಲ್ಲವೂ ಸಾಧ್ಯವಾಗಿದ್ದು ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿಯಿಂದ. ವರದಿಯಿಂದ ಎಚ್ಚೆತ್ತ ಆಡಳಿತ ಎದ್ದೆನೋ, ಬಿದ್ದೆನೋ ಎನ್ನುವಂತೆ ಕಿಮ್ಸ್ ಆಸ್ಪತ್ರೆಯಲ್ಲಿ ಬೆಳಗ್ಗೆಯೇ ಫ್ಯಾನ್ ಅಳವಡಿಸಿದ್ದಾರೆ. ಕುಡಿಯುವ ನೀರೂ ಪೂರೈಸಿದ್ದಾರೆ.

ಕೊಪ್ಪಳ ಕಿಮ್ಸ್ ಕರ್ಮಕಾಂಡವನ್ನು ಕನ್ನಡಪ್ರಭ ಬಯಲಿಗೆ ಎಳೆದಾಗಲೆಲ್ಲ ಹೊದ್ದು ಮಲಗಿದ್ದ ಆಡಳಿತ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗುತ್ತದೆ. ಈಗಲೂ ಹಾಗೆ ಆಗಿದೆ, "ಬಿಸಿಲ ಧಗೆಗೆ ಕಿಮ್ಸ್ ಆಸ್ಪತ್ರೆಯಲ್ಲಿಯೇ ಬೇಯುತ್ತಿರುವ ಕಂದಮ್ಮ, ರೋಗಿಗಳು " ಎನ್ನುವ ತಲೆಬರಹದಡಿ ಪ್ರಕಟವಾದ ವರದಿ ಭಾರಿ ಸದ್ದು ಮಾಡಿತು. ಕನ್ನಡಪ್ರಭ ವರದಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ನೆಟ್ಟಿಗರು ಆಡಳಿತವನ್ನು, ಜನಪ್ರತಿನಿಧಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇಂಥ ಆಡಳಿತಕ್ಕೆ ಧಿಕ್ಕಾರ ಇರಲಿ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇಲ್ಲಿಯ ಜನಪ್ರತಿನಿಧಿಗಳನ್ನು ಹಾಗೂ ಕಿಮ್ಸ್ ಕಾಲೇಜಿನ ನಿರ್ದೇಶಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೆಲ್ಲವೂ ಕಿಮ್ಸ್ ಆಡಳಿತಕ್ಕೆ ಬಿಸಿಮುಟ್ಟುವಂತೆ ಮಾಡಿತು.

ಹಲವಾರು ದಿನಗಳಿಂದ ಮೌನವಾಗಿದ್ದ ಆಡಳಿತ ಹತ್ತು ಗಂಟೆಯ ವೇಳೆಯಲ್ಲಿ ದಿಢೀರನೆ ಆಸ್ಪತ್ರೆಯಲ್ಲಿನ ವಾರ್ಡ್‌ಗಳಲ್ಲಿ ಫ್ಯಾನ್ಸ್ ಅಳವಡಿಸಿದರು. ಅಷ್ಟು ದಿನ ಅವುಗಳು ಎಲ್ಲಿದ್ದವೋ ಗೊತ್ತಿಲ್ಲ. ಆದರೆ, ಏಕಾಏಕಿ ದುರಸ್ತಿಗೆ ಬಂದಿರುವ ಫ್ಯಾನ್‌ಗಳನ್ನು ತೆಗೆದು ಉತ್ತಮವಾಗಿರುವ ಫ್ಯಾನ್‌ಗಳನ್ನು ಅಳವಡಿಸಿದರು.

ನಿಟ್ಟುಸಿರುಬಿಟ್ಟ ಕಂದಮ್ಮಗಳು, ರೋಗಿಗಳು


ಫ್ಯಾನ್‌ಗಳು ತಿರುಗುತ್ತಿದ್ದಂತೆ ಕಂದಮ್ಮಗಳು ಹಾಗೂ ರೋಗಿಗಳು ನಿಟ್ಟುಸಿರುಬಿಟ್ಟರು. ಕನ್ನಡಪ್ರಭಕ್ಕೆ ಥ್ಯಾಂಕ್ಸ್ ಹೇಳಿದರು. ನಾವು ಎಷ್ಟೇ ಹೇಳಿದರೂ ಯಾರೂ ಕಿವಿಯಲ್ಲಿ ಹಾಕಿಕೊಳ್ಳಲೇ ಇಲ್ಲ. ಇಲ್ಲಿ ಇರೋದೆ ಹಿಂಗೆ, ಬೇಕಾದರೆ ನಿಮ್ಮ ಮನೆಯಿಂದ ಫ್ಯಾನ್ ತಂದು ಹಾಕಿಕೊಳ್ಳಿ ಎಂದವರು ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ತಂದು ಹಾಕಿದ್ದಾರೆ ನೋಡಿ ಎಂದು ರೋಗಿಗಳ ಸಂಬಂಧಿಕರು ಹೇಳಿದ್ದಾರೆ.

ಶುರುವಾಗದ ಎಸಿ

ಫ್ಯಾನ್ ಬಂದಿವೆ, ನೀರೂ ಬಂದಿದೆ. ಆದರೆ, ಮಕ್ಕಳ ಐಸಿಯು ಘಟಕದಲ್ಲಿ ಎಸಿ ಇನ್ನೂ ಆರಂಭವಾಗಿಲ್ಲ. ಎಸಿ ದುರಸ್ತಿ ಮಾಡಲು ಮುಂದಾಗಿದ್ದಾರೆ. ಅದಿನ್ನೂ ಕಾರ್ಯಗತವಾಗಿಲ್ಲ. ಆದರೆ, ಐಸಿಯು ಘಟಕದಲ್ಲಿಯೂ ಅಗತ್ಯ ಫ್ಯಾನ್ ಅಳವಡಿಸಿದ್ದಾರೆ. ಇನ್ನು ಕುಡಿಯುವ ನೀರಿನ ನಲ್ಲಿಯಲ್ಲಿ ನೀರು ಬಂದಿದೆ. ಆದರೆ, ಶುದ್ಧೀಕರಣ ಘಟಕದಿಂದ ನೀರು ಬಂದಿಲ್ಲ. ಬದಲಾಗಿ ಬೋರ್‌ವೆಲ್ ನೀರು ಬಿಟ್ಟಿದ್ದಾರೆ ಎನ್ನುವುದು ಮಾತ್ರ ನಾಚಿಕೆಗೇಡಿನ ಸಂಗತಿಯೇ ಸರಿ.

ಆರಂಭವಾಗದ ಎಸಿ

ಕನ್ನಡಪ್ರಭದಲ್ಲಿ ವರದಿಯಾಗುತ್ತಿದ್ದಂತೆ ಫ್ಯಾನ್ ಹಾಕಿದ್ದಾರೆ. ನೀರೂ ಬಂದಿದೆ. ಆದರೆ, ಐಸಿಯು ಘಟಕದಲ್ಲಿನ ಎಸಿ ಪ್ರಾರಂಭವಾಗಿಲ್ಲ. ಕುಡಿಯಲು ಶುದ್ಧೀಕರಿಸಿದ ನೀರು ಬರಬೇಕಾಗಿದೆ ಎಂದು ರೋಗಿಯ ಸಂಬಂಧಿ ಕಿರಣ ಬಂಗಾಳಿಗಿಡದ ಹೇಳಿದರು.