ಬ್ಯಾಡಗಿ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಿವಣ್ಣನವರ ಅಭಿಮಾನಿಗಳು ಶಾಸಕ ಬಸವರಾಜ ಶಿವಣ್ಣನವರಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಅವರ ಅಭಿಮಾನಿಯೋರ್ವ ಪೆಟ್ರೋಲ್ ಸುರುವಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.
ಪಟ್ಟಣದ ಕಾಂಗ್ರೆಸ್ ಭವನದಿಂದ ಆರಂಭವಾದ ಮೆರವಣಿಗೆ ಹಂಸಭಾವಿ ರಸ್ತೆ ಮೂಲಕ ಹಳೇ ಪುರಸಭೆ ಎದುರು ಸಭೆಯಾಗಿ ಮಾರ್ಪಟ್ಟಿತು. ಈ ವೇಳೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತಲ್ಲದೇ ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಹಾಕುವ ಮೂಲಕ ಸಚಿವ ಸ್ಥಾನಕ್ಕಾಗಿ ಬೇಡಿಕೆಯನ್ನಿಟ್ಟರು.ಆತ್ಮಹತ್ಯೆಗೆ ಯತ್ನ: ಶಾಸಕ ಶಿವಣ್ಣನವರ ಅವರಿಗೆ ಸಚಿವ ಸ್ಥಾನಕ್ಕಾಗಿ ಬ್ಯಾಡಗಿ ಮತಕ್ಷೇತ್ರದ ದೇವಿಹೊಸೂರು ಗ್ರಾಮದ ಮಾಜಿ ಸದಸ್ಯ ಮಂಜುನಾಥ ಕರಬಣ್ಣನವರ ಪೆಟ್ರೋಲ್ ಸುರಿದು ಅತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಆದರೆ ಸ್ಥಳದಲ್ಲೇ ಇದ್ದ ಪೊಲೀಸರು ಪೆಟ್ರೋಲ್ ಬಾಟಲಿ ಕಸಿದು ಆತನನ್ನು ವಶಕ್ಕೆ ಪಡೆದರು.ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರಿದ್ದರೂ ಸಹ ಕಳೆದ ಮೂರು ವರ್ಷಗಳಿಂದ ಸಚಿವ ಸ್ಥಾನ ನೀಡದೇ ಹೈಕಮಾಂಡ್ ಜಿಲ್ಲೆಯ ಕಾಂಗ್ರೆಸ್ ಮತದಾರರಿಗೆ ಅವಮಾನಿಸಿದೆ. ಅಷ್ಟಕ್ಕೂ ಜಿಲ್ಲೆಯಲ್ಲಿಯೇ ಶಾಸಕ ಬಸವರಾಜ ಶಿವಣ್ಣನವರ ಹಿರಿಯ ಶಾಸಕರಿದ್ದು, ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಹೀಗಿರುವಾಗ ಕಳೆದ 3 ವರ್ಷಗಳಿಂದ ಸಚಿವ ಸ್ಥಾನಕ್ಕೆ ನಮ್ಮ ಜಿಲ್ಲೆಯನ್ನು ಪರಿಗಣಿಸದಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇನ್ನು ಕಾಯುವ ಕೆಲಸ ಮಾಡುವುದಿಲ್ಲ. ಕೂಡಲೇ ಬಸವರಾಜ ಶಿವಣ್ಣನವರಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.
ಮಾನೆ ಬೆನ್ನಿಗೆ ಚೂರಿ: ಬೇರೆ ಜಿಲ್ಲೆಯಿಂದ ಬಂದು ಹಾನಗಲ್ಲನಲ್ಲಿ ಶಾಸಕರಾಗಿರುವ ಶ್ರೀನಿವಾಸ ಮಾನೆ ಬಸವರಾಜ ಶಿವಣ್ಣನವರ ಸಹಕಾರದಿಂದ ಶಾಸಕರಾಗಿದ್ದಾರೆ. ತಮಗೆ ಸಚಿವ ಸ್ಥಾನ ಬೇಕಾದಲ್ಲಿ ವರಿಷ್ಠರೆದುರು ಒತ್ತಡ ಹೇರಲಿ ಆದರೆ ಶಿವಣ್ಣನವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುವ ಮೂಲಕ ವರಿಷ್ಠರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ನಿಲ್ಲಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಬಸವರಾಜ ಸವಣೂರು, ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಮುನಾಫ್ ಎರೇಶೀಮಿ ಮಾತನಾಡಿದರು.