ಸಾರಾಂಶ
ಪಟ್ಟಣದ ನ್ಯಾಯಾಲಯದಿಂದ ಪದೋನ್ನತಿ ಹೊಂದಿದ ಹಾಗೂ ವರ್ಗಾವಣೆ ಹೊಂದಿದ ನ್ಯಾಯಾಧೀಶರನ್ನು ವಕೀಲರ ಸಂಘದಿಂದ ಬುಧವಾರ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ನ್ಯಾಯಾಲಯದಿಂದ ಪದೋನ್ನತಿ ಹೊಂದಿದ ಹಾಗೂ ವರ್ಗಾವಣೆ ಹೊಂದಿದ ನ್ಯಾಯಾಧೀಶರನ್ನು ವಕೀಲರ ಸಂಘದಿಂದ ಬುಧವಾರ ಸನ್ಮಾನಿಸಲಾಯಿತು.ಹಿರಿಯ ಶ್ರೇಣಿ ನ್ಯಾಯಾಧೀಶೆ ಸರಸ್ವತಿದೇವಿ ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ ಕೊಪ್ಪಳ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾಗಿ ವರ್ಗಾವಣೆ ಹೊಂದಿದ್ದಾರೆ ಹಾಗೂ ಪ್ರಥಮ ದರ್ಜೆ ನ್ಯಾಯಾಧೀಶ ಸತೀಶ ಬಿ. ಹೊಸಕೋಟೆಗೆ ವರ್ಗಾವಣೆಯಾಗಿರುವ ನಿಮಿತ್ತ ಇಬ್ಬರೂ ನ್ಯಾಯಾಧೀಶರಿಗೆ ಕುಷ್ಟಗಿ ವಕೀಲರ ಸಂಘದ ವತಿಯಿಂದ ಗೌರವ ಪೂರ್ವಕ ಬೀಳ್ಕೊಡುಗೆ ಸಮಾರಂಭ ಹಾಗೂ ಸನ್ಮಾನ ಸಮಾರಂಭವನ್ನು ವಕೀಲರ ಸಂಘದಲ್ಲಿ ನಡೆಸಲಾಯಿತು.
ಈ ಸಮಾರಂಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಕೆ., ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಕಾರ್ಯದರ್ಶಿ ಮೈನುದ್ದಿನ ಮುಲ್ಲಾ, ಹಿರಿಯ ವಕೀಲರಾದ ನಾಗಪ್ಪ ಸೂಡಿ, ವೆಂಕಟೇಶ್ ಇಳಿಗೇರ, ಎಚ್.ಬಿ. ಕುರಿ, ರುದ್ರಯ್ಯ ಗುರುಮಠ, ಮಾರುತಿ ಡಿ., ಆರ್.ಕೆ. ದೇಸಾಯಿ, ಅಮರೇಗೌಡ ಪಾಟೀಲ್, ರಾಜು ಪಾಟೀಲ. ಹುಲಗಪ್ಪ ಚೂರಿ, ವಿನಾಯಕ ಭೋಸಲೆ, ಸುಭದ್ರ ದೇಸಾಯಿ ಹಾಗೂ ವಕೀಲರಿದ್ದರು.ಕುಷ್ಟಗಿ ತಾಲೂಕಿನಲ್ಲಿ ಸಾಧಾರಣ ಮಳೆ:
ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮಸಾಗರ, ಹನುಮನಾಳ ಹಾಗೂ ತಾವರಗೇರಾ ಭಾಗದಲ್ಲಿ ಸಾಧಾರಣವಾಗಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ಬಿರುಗಾಳಿ ಹಾಗೂ ಸಿಡಿಲು ಗುಡುಗಿನೊಂದಿಗೆ ಆರಂಭವಾದ ಮಳೆಯು ಬೆಳಗಿನವರೆಗೂ ಜಿಟಿ ಜಿಟಿಯಾಗಿ ಮುಂದುವರೆಯಿತು. ರೈತಾಪಿ ಮತ್ತು ಬರಗಾಲ ಹಾಗೂ ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದ ಜನರಿಗೆ ಈ ಮಳೆ ತಂಪಾದ ಆಹ್ಲಾದ ನೀಡಿತು. ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬುಧವಾರ ಸ್ವಲ್ಪ ಪ್ರಮಾಣದಲ್ಲಿ ಬಿಸಿಲಿನ ತಾಪ ಕಡಿಮೆಯಾಗಿತ್ತು.ಮಳೆರಾಯ ಭೂಮಿಯನ್ನು ತಂಪಾಗಿಸಿದ್ದು, ಮುಂಗಾರು ಬಿತ್ತನೆಗೆ ಹೊಲ ಹದ ಮಾಡುವ ರೈತರಿಗೆ ಅನೂಕೂಲವಾಗಿದೆ.ಮಳೆ ಮಾಪನದ ವಿವರ:ಕುಷ್ಟಗಿ 40 ಮಿಮೀ., ದೋಟಿಹಾಳ 30.3 ಮಿಮೀ., ಹನಮಸಾಗರ 18.1 ಮಿಮೀ., ಕಿಲ್ಲಾರಟ್ಟಿ 6.2 ಮಿಮೀ., ತಾವರಗೇರಾ 10 ಮಿಮೀ. ಮಳೆ ವರದಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.