ಸಾರಾಂಶ
ಭಟ್ಕಳ: ಪಟ್ಟಣದ ಆಟೋ ರಿಕ್ಷಾ ಚಾಲಕರು, ಮಾಲೀಕರ ಸಂಘದ ಗಣೇಶನ ಮೂರ್ತಿ ಸೇರಿದಂತೆ ವಿವಿಧ ಕಡೆ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿಯನ್ನು ಗಣೇಶೋತ್ಸವದ ಐದನೇ ದಿನವಾದ ಬುಧವಾರ ರಾತ್ರಿ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ವಿಸರ್ಜಿಸಲಾಯಿತು. ಬುಧವಾರ ರಾತ್ರಿ ಆಟೋ ಚಾಲಕರ ಮಾಲೀಕರ ಗಣೇಶ ಮೂರ್ತಿ, ವಾಯವ್ಯ ಸಾರಿಗೆ ಸಂಸ್ಥೆಯ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿ, ಮಣ್ಕುಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ ಗಣೇಶ, ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿನ ವಿಶ್ವ ಹಿಂದೂ ಪರಿಷತ್ ಗಣಪತಿ, ಪೊಲೀಸ್ ಇಲಾಖೆಯ ಗಣೇಶನ ಮೂರ್ತಿಯನ್ನು ಅದ್ಧೂರಿಯಾಗಿ ಚೌತನಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಯುದ್ದಕ್ಕೂ ಯುವಕರ ನೃತ್ಯ, ಹಾಡು ಜೋರಾಗಿತ್ತು. ಪರಸ್ಪರ ಬಣ್ಣ ಎರಚಿಕೊಂಡು ಸಂತಸಪಟ್ಟರು. ಆಟೊ ರಿಕ್ಷಾ ಚಾಲಕರ ಮಾಲೀಕರ ಸಂಘದ ಗಣೇಶನ ಮೂರ್ತಿ ವಿಸರ್ಜನೆ ವೇಳೆ ರಿಕ್ಷಾ ಚಾಲಕರು ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ ಸೇರಿದಂತೆ ಪದಾಧಿಕಾರಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರಿಕ್ಷಾ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು.ವಿವಿಧ ಗಣೇಶನ ಮೂರ್ತಿ ಮೆರವಣಿಗೆ ಸಂದರ್ಭದಲ್ಲೂ ಪ್ರಮುಖರು ಸೇರಿದಂತೆ ಹೆಚ್ಚು ಜನರಿದ್ದರು. ತಾಲೂಕಿನ ಶಿರಾಲಿ, ಮುರ್ಡೇಶ್ವರದಲ್ಲಿಯೂ ಗಣೇಶೋತ್ಸವ ಆಚರಣೆಯ ಐದನೇ ದಿನದಂದು ಗಣೇಶನ ಮೂರ್ತಿಯನ್ನು ಅದ್ಧೂರಿಯಾಗಿ ವಿಸರ್ಜಿಸಲಾಯಿತು. ವಿಸರ್ಜನೆ ವೇಳೆ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಲ ಮಳೆಯ ಮಧ್ಯೆಯೂ ಗಣೇಶೋತ್ಸವವನ್ನು ತಾಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ.
ಹೊನ್ನಾವರದಲ್ಲೂ ಗಣಪತಿ ವಿಸರ್ಜನೆಹೊನ್ನಾವರ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚೌತಿ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ಐದನೆ ದಿನವಾದ ಬುಧವಾರದಂದು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಶರಾವತಿ ನದಿಯಲ್ಲಿ ವಿಸರ್ಜಿಸಿದರು.ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಪ್ರತಿಷ್ಠಾಪಿಸಿದ ಗಣಪತಿಯನ್ನು ಶಾಲೆಯ ವಿದ್ಯಾರ್ಥಿಗಳು ಗಣಪತಿ ಬಪ್ಪಾ ಮೊರಯಾ ಎನ್ನುತ್ತಾ ಶಾಲಾ ಆವಾರದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಬಂದರ್ ನಲ್ಲಿ ವಿಸರ್ಜನೆಗೆ ಕೊಂಡೊಯ್ದರು. ನಂತರ ಗಣೇಶನನ್ನು ಶರಾವತಿ ನದಿಯಲ್ಲಿ ವಿಸರ್ಜಿಸಿದರು. ದುರ್ಗಾಕೇರಿಯ ಗಣೇಶೋತ್ಸವ ಸಮಿತಿಯ ಸದಸ್ಯರು ಕೇಸರಿ ಪೇಟ ತೊಟ್ಟು ಮೆರವಣಿಗೆ ನಡೆಸಿದರು.
ಶೆಟ್ಟಿಕೇರೆ, ತಾರಿಬಾಗಿಲ, ತುಳಸಿನಗರ, ಉದ್ಯಮ ನಗರ, ಕಮಟೆಹಿತ್ತಲ, ಬಂದರ್ ಸೇರಿದಂತೆ ಹಲವು ಕಡೆಯ ಸಾರ್ವಜನಿಕ ಗಣಪತಿ ಶರಾವತಿ ನದಿಯಲ್ಲಿ ವಿಸರ್ಜನೆಗೊಂಡವು.