ಮಠಾಧೀಶರಿಂದ ದೇಸಿ ಸಂಸ್ಕೃತಿ ಪುನರುಜ್ಜೀವನ ಕಾರ್ಯವಾಗಲಿ

| Published : Sep 12 2024, 01:53 AM IST

ಮಠಾಧೀಶರಿಂದ ದೇಸಿ ಸಂಸ್ಕೃತಿ ಪುನರುಜ್ಜೀವನ ಕಾರ್ಯವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವ ಜನಾಂಗವನ್ನು ಮರಳಿ ದೇಸಿ ಸಂಸ್ಕೃತಿಗೆ ತರುವ ಕೆಲಸವನ್ನು ಧಾರ್ಮಿಕ ಕೇಂದ್ರಗಳು, ಮಠಾಧೀಶರು ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವ ಜನಾಂಗವನ್ನು ಮರಳಿ ದೇಸಿ ಸಂಸ್ಕೃತಿಗೆ ತರುವ ಕೆಲಸವನ್ನು ಧಾರ್ಮಿಕ ಕೇಂದ್ರಗಳು, ಮಠಾಧೀಶರು ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.

ತಾಲೂಕಿನ ಗೊಡಚಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರ, ರೇಣುಕಾಚಾರ್ಯ ಗುರುಕುಲ, ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಜ್ಞಾನ ಮಂಟಪದ ಕಟ್ಟಡದ ಶಂಕುಸ್ಥಾಪನೆ ಹಾಗೂ ವೀರಭದ್ರೇಶ್ವರ ಜಯಂತಿ ಮತ್ತು ಧರ್ಮಸಭೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೊದಲಿನಿಂದಲೂ ರಂಭಾಪುರಿ ಪೀಠ ಧರ್ಮ ಜಾಗೃತಿ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.ಯುವಜನರಿಗೆ ಮತ್ತು ಭವಿಷ್ಯದ ನಾಗರಿಕರನ್ನು ಸನ್ಮಾರ್ಗದತ್ತ ಸೆಳೆಯಲು ಗುರುಕುಲಗಳ ಅಗತ್ಯ ಹೆಚ್ಚಾಗಿದೆ. ಮನುಷ್ಯ ಎಷ್ಟೇ ಶ್ರೀಮಂತನಿದ್ದರೂ ಮಾನಸಿಕ ಮತ್ತು ದೈಹಿಕ ನೆಮ್ಮದಿಗೆ ಮಂಠ, ಮಂದಿರಗಳು ಅಗತ್ಯವಾಗಿವೆ. ವ್ಯವಹಾರಿಕ ಬದುಕಿನಿಂದ ಧಾನ, ಧರ್ಮದ ಕಡೆ ಜನರು ಒಲವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಜನರ ಸಲಹೆ ಮತ್ತು ಸಹಕಾರ ಅಗತ್ಯವಿದೆ ಎಂದು ಹೇಳಿದ ಶೆಟ್ಟರ, ಗೊಡಚಿಯಲ್ಲಿ ನಿರ್ಮಾಣವಾಗುವ ಗುರುಕುಲಕ್ಕೆ ಸಂಸದರ ಅಭಿವೃದ್ಧಿ ನಿಧಿಯಲ್ಲಿ ಅನುದಾನ ನೀಡುವ ಭರವಸೆ ನೀಡಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ ಮಾತನಾಡಿ, ಪ್ರತಿಯೊಬ್ಬರು ದುಡಿದು ಗಳಿಸಿರುವ ಸಂಪತ್ತಿನಲ್ಲಿ ಸಾಧ್ಯವಾದಷ್ಟು ಸಮಾಜದ ಋಣ ತೀರಿಸಲು ಮಠ, ಮಂದಿರಗಳಿಗೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಕೊಡುವ ಮೂಲಕ ನೆಮ್ಮದಿಯ ಜೀವನ ನಡೆಸಬೇಕು ಎಂದರು.ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ರಂಭಾಪುರಿ ಶ್ರೀಗಳ ದಸರಾ ದರ್ಭಾರ್‌ ನಡೆಯುವುದು, ಗುರುಕುಲ ನಿರ್ಮಾಣ ರಾಜ್ಯದ ಎಲ್ಲಿಯೂ ನಡೆದಿಲ್ಲ. ಇದರಿಂದ ಈ ಕ್ಷೇತ್ರ ಪಾವನ ಕ್ಷೇತ್ರವಾಗಲಿದೆ ಎಂದು ತಿಳಿಸಿದರು.ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕಟಕೋಳದ ವೀರಭದ್ರ ಶಿವಯೋಗಿ ಶಿವಾಚಾರ್ಯರು, ಕಿಲ್ಲಾತೊರಗಲ್‌ದ ಚನ್ನಮಲ್ಲ ಶಿವಾಚಾರ್ಯರು, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ಹೊಸಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯರು, ಅಶೋಕ ಪೂಜಾರ, ಟಿ.ಪಿ. ಮುನವಳ್ಳಿ, ಮಾರುತಿ ತುಪ್ಪದ ಸೇರಿದಂತೆ ಹಲವರಿದ್ದರು. ರಾಜೇಶ ಬೀಳಗಿ ಸ್ವಾಗತಿಸಿದರು. ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿ, ವಂದಿಸಿದರು.ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮಠ, ಮಂದಿರಗಳು, ಪೀಠಗಳು ಧಾರ್ಮಿಕ ಜಾಗೃತಿ, ಸಂಸ್ಕಾರ, ಪರಂಪರೆ ಪಸರಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಭಾರತಕ್ಕೆ ವಿಶ್ವಗುರು ಸ್ಥಾನ ಲಭಿಸಿದೆ. ಇಂದು ನಾಗರಿಕ ಸಮಾಜದಲ್ಲಿ ಅಧುನಿಕತೆಯ ಭರಾಟೆ, ಟಿವಿ ಮತ್ತು ಮೊಬೈಲ್‌ ಹಾವಳಿಯಿಂದ ಸಂಸ್ಕಾರ, ಧಾರ್ಮಿಕತೆಯತ್ತ ಒಲವು ಕಡಿಮೆಯಾಗಿದೆ. ಧರ್ಮಗುರುಗಳು ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸನ್ಮಾರ್ಗದತ್ತ ಕರೆತರುವ ಕೆಲಸ ಮಾಡಬೇಕು.

-ಜಗದೀಶ ಶೆಟ್ಟರ ಸಂಸದರು.