ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಿ

| Published : Sep 12 2024, 01:53 AM IST

ಸಾರಾಂಶ

ಕೃಷಿ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಹಳೆ ಪದ್ದತಿಯ ಬದಲು ಕೃಷಿಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ತಿಪಟೂರಿನಲ್ಲಿ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ಹಾಗೂ ರೈತರಿಗೆ ಕೃಷಿ ಯಂತ್ರೋಪಕರಣಗಳು ಮತ್ತು ಸೂಕ್ಷ್ಮ ನೀರಾವರಿ ಘಟಕಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕೃಷಿ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಹಳೆ ಪದ್ದತಿಯ ಬದಲು ಕೃಷಿಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ತಾಲೂಕಿನ ಬೆನ್ನಾಯಕನಹಳ್ಳಿಯಲ್ಲಿ ಆತ್ಮ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ರಾಗಿ ಬೆಳೆಗೆ ಕೃಷಿ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ಹಾಗೂ ರೈತರಿಗೆ ಕೃಷಿ ಯಂತ್ರೋಪಕರಣಗಳು ಮತ್ತು ಸೂಕ್ಷ್ಮ ನೀರಾವರಿ ಘಟಕಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 34 ಕೋಟಿ ಇತ್ತು. ಆಹಾರ ಧಾನ್ಯಗಳ ಉತ್ಪಾದನೆ 51 ಮಿಲಿಯನ್ ಟನ್ ಇತ್ತು. ನಂತರದ ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮಾಡಲು ಅಗತ್ಯವಾದ ಭೂಮಿ ಕಡಿಮೆಯಾಗಿದೆ. ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ 141 ಕೋಟಿಯಷ್ಟಿದ್ದು, ಏರುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆಹಾರ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಸದರಿ ಯೋಜನೆಯಡಿ ತಾಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿದೆ ಎಂದರು. ಉಪ ಕೃಷಿ ನಿರ್ದೇಶಕ ಹುಲಿರಾಜ ಮಾತನಾಡಿ, ಬೆಳೆಗಳಿಗೆ ಔಷಧ ಸಿಂಪಡಣೆ ಮಾಡಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿ ಡ್ರೋನ್ ಬಳಸಿ ಸಿಂಪಡಣೆ ಮಾಡಬೇಕು. ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದರಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ಆದ್ದರಿಂದ ನ್ಯಾನೋ ಯೂರಿಯ ಸಿಂಪಡಣೆಯು ಉತ್ತಮ ಮಾರ್ಗವಾಗಿದೆ. ನ್ಯಾನೋ ಯೂರಿಯಾದ ಸೂಕ್ಷ್ಮ ಕಣಗಳು ಹೆಚ್ಚಿನ ಸುತ್ತಳತೆ ಹೊಂದಿದ್ದು, ಎಲೆಗಳ ಮೇಲೆ ಸಿಂಪರಣೆ ಮಾಡಿದಾಗ ಶೀರ್ಘವಾಗಿ ಎಲೆಗಳಲ್ಲಿನ ಸೂಕ್ಷ್ಮ ರಂಧ್ರಗಳಾದ ಸ್ಟೋಮ್ಯಾಟ ಮೂಲಕ ಸಸ್ಯದ ಶರೀರದೊಳಗೆ ಸೇರಿ ಸಸ್ಯದ ಬೆಳವಣಿಗೆಗೆ ಸಹಕರಿಸುವುದರಿಂದ ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ. ಪವನ್ ಮಾತನಾಡಿ, ಕೃಷಿಯಲ್ಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿ ಕೃಷಿ ಕಾರ್ಯಗಳು ಸಕಾಲದಲ್ಲಿ ಮುಂದುವರೆಯಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ಹಾಗೂ ಪ.ಜಾ, ಪ.ಪಂ ವರ್ಗದ ರೈತರಿಗೆ ಶೇ.90ರ ಸಹಾಯಧನದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ವಿತರಿಸಲಾದ ಯಂತ್ರೋಪಕರಣಗಳನ್ನು ಹಣಕ್ಕಾಗಿ ಮಾರಾಟ ಮಾಡದೆ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ನೀರಿನ ಸಮರ್ಥ ಬಳಕೆಗೆ ಸೂಕ್ಷ್ಮ ನೀರಾವರಿ ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.೯೦ರ ಸಹಾಯಧನದಲ್ಲಿ ಕೃಷಿ ಇಲಾಖೆಯಿಂದ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್. ಸದಾಶಿವಯ್ಯ, ಗ್ರಾಪಂ ಅಧ್ಯಕ್ಷ ಬಸವರಾಜು, ಇಫ್ಕೋ ಸಂಸ್ಥೆಯ ಪ್ರತಿನಿಧಿ ಚಿದಂಬರಮೂರ್ತಿ, ನರಸಿಂಹಯ್ಯ ಇದ್ದರು.