ಹೊಸ್ಕೇರಿ ಗ್ರಾಪಂಗೆ ವರ್ಗಾವಣೆಯಾಗಿರುವ ಪಿಡಿಒ ಎ.ಎ. ಅಬ್ದುಲ್ಲ ಅವರಿಗೆ ಹೊದ್ದೂರು ಗ್ರಾಪಂ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೆರವೇರಿತು.

ಮಡಿಕೇರಿ: 2019ರಿಂದ 2025ರವರೆಗೆ ಹೊದ್ದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ಹೊಸ್ಕೇರಿ ಗ್ರಾಪಂಗೆ ವರ್ಗಾವಣೆಯಾಗಿರುವ ಎ.ಎ. ಅಬ್ದುಲ್ಲ ಅವರು ದೂರದೃಷ್ಟಿ ಹಾಗೂ ಕ್ರಿಯಾಶೀಲ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ ಎಂದು ಹೊದ್ದೂರು ಗ್ರಾಪಂ ಆಡಳಿತ ಮಂಡಳಿ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಗಣ್ಯರು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಎಫ್ಎಂಸಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಚೌರೀರ ಜಗತ್ ತಿಮ್ಮಯ್ಯ, ಹೊದ್ದೂರು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಅಭಿವೃದ್ಧಿ ಕೆಲಸ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಗ್ರಾಪಂ ಸುಸಜ್ಜಿತ ಕಟ್ಟಡ ಹೊಂದಿದೆ. ಇದೆಲ್ಲವನ್ನೂ ಸಾಧಿಸಿಸಲು ದೂರದೃಷ್ಟಿ ಮತ್ತು ಅಭಿವೃದ್ಧಿಯ ಚಿಂತನೆ ಹೊಂದಿರುವ ಅಭಿವೃದ್ಧಿ‌ ಅಧಿಕಾರಿ ಅಬ್ದುಲ್ಲ ಅವರ ಕೆಲಸದಿಂದ ಸಾಧ್ಯವಾಗಿದೆ‌ ಎಂದರು. ಮಡಿಕೇರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಖರ್ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಅರಿವು ಪಡೆದು, ಆಡಳಿತ ಮಂಡಳಿಯ ವಿಶ್ವಾಸ ಪಡೆದು ದೂರದೃಷ್ಟಿಯಿಂದ ಕೆಲಸ ಮಾಡಿದ್ದಾರೆ. ಡಿಜಿಟಲ್ ಗ್ರಂಥಾಲಯ ಸ್ಥಾಪಿಸುವ ಮೂಲಕ ಹೊದ್ದೂರು ದೇಶಕ್ಕೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಗ್ರಾಪಂ ಅಧ್ಯಕ್ಷ ಹಂಸ ಕೊಟ್ಟಮುಡಿ, ಅಬ್ದುಲ್ಲ ಅವರ ರೀತಿ ಜನರಿಗಾಗಿ ದುಡಿಯುವ ಅಭಿವೃದ್ಧಿ ಅಧಿಕಾರಿ ಇದುವರೆಗೆ ನೋಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು, ಸಮನ್ವಯದಿಂದ ಕೆಲಸ ಮಾಡಿದ್ದಾರೆ‌ ಎಂದರು.

ಗ್ರಾಪಂ ಆಡಳಿತ ಮಂಡಳಿ, ಹೊದ್ದೂರು ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ಲ ಅವರು, ಹೊದ್ದೂರು ಗ್ರಾಪಂ ನನ್ನ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟಿದೆ. ಇಲ್ಲಿಯ ಜನತೆ ಪ್ರೀತಿ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಹಮೀದ್, ಮೊಣ್ಣಪ್ಪ ಮಾತನಾಡಿದರು.ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಅನುರಾಧ, ಗ್ರಾಮಸ್ಥರಾದ ಪ್ರೀತಮ್ ಪೊನ್ನಪ್ಪ, ಗ್ರಾಪಂಗೆ ಸ್ಥಳ ದಾನಿಗಳಾದ ಪದ್ಮಾ ಕೋರನ, ರಾಜೇಂದ್ರ, ಅಭಿವೃದ್ಧಿ ಅಧಿಕಾರಿ ವತ್ಸಲ, ಸಮಾಜ ಸೇವಕ ಸುಬ್ರಮಣಿ, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಪಾಟೀಲ್, ಮಾಜಿ ಅಧ್ಯಕ್ಷ ದಿನೇಶ್, ಹಂಸ ಮುಸ್ಲಿಯಾರ್, ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ರವೀಶ್, ಅಹ್ಮದ್ ಹೊದವಾಡ, ಬಲ್ಲಮಾವಟಿ ಗ್ರಾಪಂ ಪಿಡಿಓ ಶರತ್ ಪೂಣಚ್ಚ, ಹೊದ್ದೂರು ಗ್ರಾಪಂ ಸದಸ್ಯರು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಪಿಡಿಓ ಅಬ್ದುಲ್ಲ ಅವರ ಕುಟುಂಬಸ್ಥರು ಹಾಜರಿದ್ದರು.