ಜಾನಪದ ತಜ್ಞರುಗಳಾದ ಡಾ. ಹಂಪನಹಳ್ಳಿ ತಿಮ್ಮೇಗೌಡ, ಮೇಟಿಕೆರೆ ಹಿರಿಯಣ್ಣ, ಡಾ. ಚಂದ್ರು ಕಾಳೇನಹಳ್ಳಿ ಅವರು ಮಾತನಾಡಿ, ಶಿವನಗೌಡ ಪಾಟೀಲರು ಬರೀ ಶಿಕ್ಷಕ ಅಷ್ಟೇ ಅಲ್ಲದೇ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಸೇವೆ ಮಾಡುತ್ತ ತಮ್ಮದೇ ಆದ ಛಾಪು ಮೂಡಿಸಿದ್ದು, ಇವರಿಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು, ನಿವೃತ್ತಿ ನಂತರ ಇವರು ಸಂಪೂರ್ಣವಾಗಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮ ಸೇವೆ ಮುಂದುವರಿಸಿಕೊಂಡು ಮುಂದಿನ ದಿನಗಳಲ್ಲಿ ಜಾನಪದ ಅಕಾಡೆಮಿಯಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಲ್ಲದೆ, ನಿವೃತ್ತಿ ಹಣವನ್ನು ಹೇಗೆ ವಿನಿಯೋಗಿಸಬೇಕು ಎಂಬುದರ ಬಗ್ಗೆ ಮೇಟಿಕೆರೆ ಹಿರಿಯಣ್ಣ ಅವರು ಪಾಟೀಲರಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಶಿಕ್ಷಕ ಶಿವನಗೌಡ ಪಾಟೀಲ ಅವರು ನನಗೆ ಸುಮಾರು ೨೫ ವರ್ಷಗಳಿಂದ ಪರಿಚಯ ಇದ್ದು ತಮ್ಮ ವೃತ್ತಿ ಜೀವನದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ಎಚ್. ಸತೀಶ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂಬೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ, ಸಾಹಿತಿ ಮತ್ತು ಆಕಾಶವಾಣಿ ಹಾಗೂ ದೂರದರ್ಶನ ಜಾನಪದ ಗಾಯಕ ಶಿವನಗೌಡ ಪಾಟೀಲ ಇವರ ವಯೋ ನಿವೃತ್ತಿ ಪ್ರಯುಕ್ತ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಯೋನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವುದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಗೌರವ ಸನ್ಮಾನ ಮತ್ತು ನೆಲಮೂಲ ಸಂಸ್ಕೃತಿಯ ಹಾಡುಗಳನ್ನು ಒಳಗೊಂಡ ಜಾನಪದವೇ ಸತ್ಯ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಇದೊಂದು ಮಾದರಿ ಬೀಳ್ಕೊಡುಗೆ ಸಮಾರಂಭ ಆಗಿದ್ದು ಅವರ ನಿವೃತ್ತಿ ಜೀವನದ ಬಾಳು ಬಂಗಾರವಾಗಲಿ ಎಂದರು. ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ. ಎನ್. ಅನಿಲ್ ಮಾತನಾಡಿ ನಿವೃತ್ತಿ ಜೀವನದಲ್ಲಿ ಪಾಟೀಲರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಮಾಡುವಂತಗಲಿ ಎಂದು ಶುಭ ಹಾರೈಸಿದರು. ಜಾನಪದ ತಜ್ಞರುಗಳಾದ ಡಾ. ಹಂಪನಹಳ್ಳಿ ತಿಮ್ಮೇಗೌಡ, ಮೇಟಿಕೆರೆ ಹಿರಿಯಣ್ಣ, ಡಾ. ಚಂದ್ರು ಕಾಳೇನಹಳ್ಳಿ ಅವರು ಮಾತನಾಡಿ, ಪಾಟೀಲರು ಬರೀ ಶಿಕ್ಷಕ ಅಷ್ಟೇ ಅಲ್ಲದೇ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಸೇವೆ ಮಾಡುತ್ತ ತಮ್ಮದೇ ಆದ ಛಾಪು ಮೂಡಿಸಿದ್ದು, ಇವರಿಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು, ನಿವೃತ್ತಿ ನಂತರ ಇವರು ಸಂಪೂರ್ಣವಾಗಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮ ಸೇವೆ ಮುಂದುವರಿಸಿಕೊಂಡು ಮುಂದಿನ ದಿನಗಳಲ್ಲಿ ಜಾನಪದ ಅಕಾಡೆಮಿಯಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಲ್ಲದೆ, ನಿವೃತ್ತಿ ಹಣವನ್ನು ಹೇಗೆ ವಿನಿಯೋಗಿಸಬೇಕು ಎಂಬುದರ ಬಗ್ಗೆ ಮೇಟಿಕೆರೆ ಹಿರಿಯಣ್ಣ ಅವರು ಪಾಟೀಲರಿಗೆ ಕಿವಿಮಾತು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್. ಎನ್. ಲೋಕೇಶ್ ಹಡೇನಹಳ್ಳಿ ಮಾತನಾಡಿ ಪಾಟೀಲರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಆಸಕ್ತಿ ಮತ್ತು ಸಾಧನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಕಸಾಪ ಕಾರ್ಯದರ್ಶಿ ದಿಂಡಗೂರು ಗೋವಿಂದರಾಜು ಮಾತನಾಡಿ ಪಾಟೀಲರ ನೇತೃತ್ವದಲ್ಲಿ ಪರಿಷತ್ತಿನಲ್ಲಿ ಜಾನಪದ ಕಲಾತಂಡ ರಚಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಹಾಸನ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ. ಜಿ. ದ್ಯಾವೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಲ್ಯ ಗೋಪಾಲ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಪಾಟೀಲರ ಕುಟುಂಬದ ವತಿಯಿಂದ ೫ ತೆಂಗಿನ ಸಸಿಗಳನ್ನು ನೆಡಲಾಯಿತು. ತಾಲೂಕಿನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಬಿ. ಬಿ. ಗೌಡ, ಎಚ್. ಬಿ. ದೇವರಾಜು, ಇನಾಸಪ್ಪ ಮತ್ತು ಸಿದ್ಧರಾಜು ಮತ್ತು ಸಾಹಿತಿ ಅಂಕನಹಳ್ಳಿ ನಂಜುಂಡಯ್ಯ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ನಾಡಿನ ಹೆಸರಾಂತ ಕಲಾವಿದರಾದ ರವಿ ಶಿವಕುಮಾರ, ಜಯಶ್ರೀ ಚಿಮ್ಮಲ್ ಟಿ. ಆರ್. ಸ್ವಾಮಿ, ಗುರುನಾಥ ಹುಬ್ಬಳ್ಳಿ, ಡಾ. ಬಸನಗೌಡ. ಪಾಟೀಲ, ಬಿ. ಆರ್. ಪಾಟೀಲ ದೊಡ್ಡಳ್ಳಿ ರಮೇಶ, ಬಾಲ ಕಲಾವಿದರಾದ ನಂದೀಶಗೌಡ. ಪಾಟೀಲ, ಪಂಚಾಕ್ಷರಿ ಚಿಮ್ಮಲ್ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ತತ್ವಪದಗಳು ಮತ್ತು ನಾಡು, ನುಡಿ ಕುರಿತಾದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರೆ ವಾದ್ಯಗೋಷ್ಠಿಯಲ್ಲಿ ದೇವರಾಜ, ಭಗವಾನ ಸಿಂಗ್ ಮತ್ತು ವಿಜಯ್ ವಾದ್ಯ ಸಹಕಾರ ನೀಡಿದರು. ಇವರೆಲ್ಲರನ್ನು ಕೂಡ ಸನ್ಮಾನಿಸಲಾಯಿತು. ಭಾವುಕರಾದ ಪಾಟೀಲರು:

ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಶಿವನಗೌಡ ಪಾಟೀಲ್ ಮಾತನಾಡುವಾಗ ತಮ್ಮ ತಂದೆತಾಯಿಯನ್ನು ನೆನೆದು ಭಾವುಕರಾಗಿ ಗಳಗಳನೆ ಅತ್ತು ಬಿಟ್ಟರಲ್ಲದೆ ತಮ್ಮ ೩೫ ವರ್ಷಗಳ ಸಾರ್ಥಕ ಸೇವೆಯ ಅನುಭಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಸಹಕಾರ ನೀಡಿದ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ತವರೂರಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ಗುರು ಹಿರಿಯರು, ಮುಖಂಡರು, ಬಂದು ಬಳಗ ಮತ್ತು ಪಾಟೀಲರ ಸ್ನೇಹ ಬಳಗ, ಶಿಷ್ಯ ಬಳಗ ಹಾಜರಿದ್ದರು.

ಶಾಲಾ ಮುಖ್ಯ ಶಿಕ್ಷಕ ಎಸ್. ಮಹೇಶ್ ಬಾಬು ಶಿಕ್ಷಕಿಯರಾದ ದಿವ್ಯ. ಎಂ. ಜಿ, ಪ್ರತಿಮಾದೇವಿ, ಕವಿತ, ಅಡುಗೆ ಸಿಬ್ಬಂದಿ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.