ಸಮೀಪದ ಕೂಡಿಗೆಯ ಕೊಡಗು ಸೈನಿಕ ಶಾಲೆ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಮೀಪದ ಕೂಡಿಗೆಯ ಕೊಡಗು ಸೈನಿಕ ಶಾಲೆ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿಲಾಗಿತ್ತು.

ಸಾಂಸ್ಕೃತಿಕ ಹಬ್ಬದಲ್ಲಿ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮೂಹ ಗೀತೆ ಗಾಯನ ಸ್ಪರ್ಧೆ ಶೀರ್ಷಿಕೆಯು ‘ಭವಿಷ್ಯ ನಮ್ಮದು’, ಎರಡನೆಯದಾಗಿ ಕಿರು ನಾಟಕ ‘ಡಿಜಿಟಲ್ ಕನ್ನಡಿ: ತಂತ್ರಜ್ಞಾನ ಮತ್ತು ನೈತಿಕತೆ’ ಎಂಬ ವಿಷಯವಾಗಿತ್ತು. ಮೂರನೆಯದಾಗಿ ಜಾನಪದ ನೃತ್ಯ: ಸ್ಥಳೀಯ ಸಂಪ್ರದಾಯಗಳು ಮತ್ತು ಪುರಾಣ ಕಥೆಗಳ ಅನಾವರಣವಾಗಿದ್ದು, ನಾಲ್ಕನೆಯದಾಗಿ ಸಮೂಹ ನೃತ್ಯ: ‘ಫ್ರೀ-ಸ್ಟೈಲ್ ಸಿನಿಮಾಟಿಕ್’ ಶೈಲಿಯಲ್ಲಿ ಎನ್ನುವ ವಿಷಯಗಳಡಿಯಲ್ಲಿ ಸ್ಪರ್ಧೆ ನಡೆಯಿತು. ಎಲ್ಲ ನಿಲಯಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ‘ಕಾರ್ಯಪ್ಪ ನಿಲಯ’ವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇದೇ ಸಂದರ್ಭ ಶಾಲೆಯ 13ನೇ ಬ್ಯಾಚ್‌ನ 12ನೇ ತರಗತಿಯ ಕೆಡೆಟ್‌ಗಳಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಕೆಡೆಟ್‌ಗಳ ಎಂಟು ವರ್ಷಗಳ ಶಿಸ್ತುಬದ್ಧ ಜೀವನ, ಕಠಿಣ ತರಬೇತಿ ಮತ್ತು ಶೈಕ್ಷಣಿಕ ಸಾಧನೆಗಳನ್ನು ತಿಳಿಸಿದರು.

ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ನಿರ್ಗಮಿತ ಕೆಡೆಟ್‌ಗಳಿಗೆ ಶಾಲೆಯ ನೆನಪಿನ ಕಾಣಿಕೆಗಳನ್ನು ವಿತರಿಸಿದರು.

ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ತಂಡದ ಕೆಲಸವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ಧೈರ್ಯ, ನಿಷ್ಠೆ ಮತ್ತು ನಾಯಕತ್ವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಿಸ್ತು ಮತ್ತು ನಡತೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಲು ಮತ್ತು ದುರಭ್ಯಾಸಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ನಾಯಕ ಹೃದಯ್ ವಂದಿಸಿದರು. ಈ ಸಂದರ್ಭ ಸುಬೇದಾರ್ ಮೇಜರ್ ರಾಮ್ ಲಾಲ್, ರೀತಾ ಕುಮಾರಿ, ದಿವ್ಯಾ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಹಿರಿಯ ಶಿಕ್ಷಕರಾದ ವಿಭಿನ್ ಕುಮಾರ್, ಡಾ. ಸಿ.ಎಸ್. ಅನುಪಮಾ, ವಿದುಷಿ ಏಂಜೆಲ್ ರಶ್ಮಿ ಡಿಸೋಜಾ, ಋತು ಎನ್. ರಾಜ್ ಹಾಗೂ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ ಹಾಗೂ ಕೆಡೆಟ್‌ಗಳು ಉಪಸ್ಥಿತರಿದ್ದರು.