ರೈತ ಮಕ್ಕಳು ಬಿಡುವಿನ ವೇಳೆ ಸಸಿ ಬೆಳೆಸಿ

| Published : Jun 13 2024, 12:46 AM IST

ಸಾರಾಂಶ

ಮಾಗಡಿ: ರೈತರ ಮಕ್ಕಳೆಲ್ಲರೂ ಶಾಲೆ ಬಿಟ್ಟ ನಂತರ ಸಸಿ ನೆಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.

ಮಾಗಡಿ: ರೈತರ ಮಕ್ಕಳೆಲ್ಲರೂ ಶಾಲೆ ಬಿಟ್ಟ ನಂತರ ಸಸಿ ನೆಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.

ತಾಲೂಕು ರೈತ ಸಂಘದ ವತಿಯಿಂದ ಪಟ್ಟಣದ ಕೆಂಪೇಗೌಡರ ಪ್ರತಿಮೆ ಮುಂದೆ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಪರಿಸರ ದಿನವನ್ನು ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಗಳಿನ್ನೂ ಸಸಿ ನೆಟ್ಟು ಪರಿಸರ ದಿನವನ್ನು ಆಚರಿಸಿಲ್ಲ. ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸಿಲ್ಲ, ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ತೋಟಗಾರಿಕೆ, ಕೃಷಿ ಇಲಾಖೆಯಲ್ಲಿ ರೈತರಿಗೆ ವಿಮೆಯಂತಹ ಸೌಲಭ್ಯಗಳನ್ನೂ ಅಧಿಕಾರಿಗಳು ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೇಮಾವತಿ ನೀರಾವರಿ ಯೋಜನೆ ವಿಚಾರವಾಗಿ ತಾಲೂಕು ರೈತ ಸಂಘದಿಂದ ಸಾಕಷ್ಟು ಹೋರಾಟ ನಡೆಸಿದ್ದೇವೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಿಜೆಪಿ ಮುಖಂಡ ಎ.ಎಚ್. ಬಸವರಾಜು, ಪ್ರಸಾದ್‌ಗೌಡ ನಮ್ಮೊಂದಿಗೆ ನಿಂತು ಪ್ರತಿಭಟಿಸಿದರು. ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರು, ಪ್ರಗತಿಪರ, ದಲಿತರ ಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಡಿದ್ದೇವೆ. ಹೇಮಾವತಿ ವಿಚಾರವಾಗಿ ಎ.ಎಚ್.ಬಸವರಾಜು ಅವರನ್ನು ಎಚ್.ಎಂ.ರೇವಣ್ಣ ಅವರ ಬಳಿ ಕರೆದುಕೊಂಡು ಹೋಗಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.

ಸಚಿವ ಕೆ.ಎನ್.ರಾಜಣ್ಣ ಅವರು ಹೇಮಾವತಿ ನೀರಾವರಿ ವಿಚಾರವಾಗಿ ಎಲ್ಲಿ ಅದುಮಬೇಕು ಅಲ್ಲಿ ಅದುಮಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದು, ಮಾಗಡಿ ತಾಲೂಕಿಗೆ ಹೇಮಾವತಿ ನೀರು ಕೊಡುವುದಿಲ್ಲ, ನೀವು ಭಯಭೀತರಾಗಬೇಡಿ ಎಂದು ತುಮಕೂರು ಜಿಲ್ಲೆಯವರಿಗೆ ಭರವಸೆ ನೀಡಿದ್ದಾರೆ. ಅಲ್ಲಿನ ಹತ್ತಾರು ಸ್ವಾಮೀಜಿಗಳು ಲಿಂಕ್ ಕೆನಾಲ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಲಾರಿಗಳನ್ನು ವಾಪಸ್ ಕಳುಹಿಸಿದ್ದಾರೆ. ನಮ್ಮ ತಾಲೂಕಿನ ಮಠಾಧೀಶರು ಹಸಿರು ಸೇನೆಯ ಗೋವಿಂದರಾಜು ಅವರು ನಡೆಸಿದ ಹೋರಾಟಕ್ಕೆ ಬಂದು ಬೆಂಬಲ ನೀಡಿರುವುದು ಉತ್ತಮ ಬೆಳವಣಿಗೆ. ತಾಲೂಕಿನ ಮಠಾಧೀಶರು ಹೇಮಾವತಿ ನೀರಾವರಿ ವಿಚಾರವಾಗಿ ಮುಂದಾಳತ್ವ ವಹಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ನೀರಾವರಿ ವಿಚಾರವಾಗಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸೋಣ ಎಂದರು.

ಹೇಮಾವತಿ ನೀರಾವರಿ ವಿಚಾರವಾಗಿ ತುಮಕೂರು ಜಿಲ್ಲೆಯ ರೈತರು ಒಗ್ಗಟ್ಟಾಗಿದ್ದಾರೆ. ಆದರೆ ತಾಲೂಕಿನ ರೈತರು ಹೋರಾಟಕ್ಕೆ ಬರಲು ನಿರಾಸಕ್ತಿ ತೋರಿಸುತ್ತಿದ್ದು ಎರಡು ತಿಂಗಳ ಹಿಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬೇಕು. ಮಳೆಯಿಲ್ಲದೇ, ಕೊಳವೆಬಾವಿಗಳಲ್ಲಿ ನೀರಿಲ್ಲದೆ ಅಡಿಕೆ ಹಾಗೂ ಇತರೆ ಬೆಳೆಗಳು ನೆಲಕಚ್ಚಿದ್ದವು. ಮುಂದಿನ ದಿನಗಳಲ್ಲೂ ಅಂತಹ ಪರಿಸ್ಥಿತಿ ಬರಬಹುದಾದ್ದರಿಂದ ಹೇಮಾವತಿ ನೀರಿಗಾಗಿ ನಡೆಯುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ನಾವು ಯಾವುದೇ ಪಕ್ಷದ ಪರ. ಹೋರಾಟ ನಡೆಸುತ್ತಿಲ್ಲ. 15 ವರ್ಷಗಳಿಂದ ರೈತರ ಪರ ಹೋರಾಡುತ್ತಿದ್ದೇನೆ. ನಂಜುಂಡಸ್ವಾಮಿ ವಿಚಾರಧಾರೆಗಳನ್ನು ಅಳವಡಿಸಿಕೊಂಡು ರೈತ ನಾಯಕ ಪುಟ್ಟಣ್ಣ ಅವರ ಗರಡಿಯಲ್ಲಿ ಬೆಳೆದಿದ್ದೇವೆ. ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಬಂದರೆ ಕೆರೆಗಳು ತುಂಬುತ್ತವೆ. ಅಂತರ್ಜಲ ಮಟ್ಟ ಹೆಚ್ಚುವುದರಿಂದ ತಾಲೂಕಿನ ರೈತರು ನೀರಾವರಿ ವಿಷಯದಲ್ಲಿ ನಿರ್ಲಕ್ಷ್ಯ, ಹಮ್ಮುಬಿಮ್ಮು ತೋರುವುದನ್ನು ಬಿಟ್ಟು ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಲೋಕೇಶ್ ಎಚ್ಚರಿಕೆ ನೀಡಿದರು.

ರೈತ ಸಂಘದ ತಾಲೂಕು ಯುವ ಘಟಕದ ಅದ್ಯಕ್ಷ ರವಿಕುಮಾರ್, ಹಳ್ಳಿಕಾರು ಹನುಮಂತರಾಜು, ಶಿವಲಿಂಗಯ್ಯ, ಹನುಮಂತಯ್ಯ, ರಾಮಣ್ಣ, ಬುಡನ್ಸಾಬ್, ನಾರಾಯಣಪ್ಪ, ಕೃಷ್ಣಪ್ಪ, ಸಿದ್ದಪ್ಪ, ವೆಂಕಟೇಶ್, ಕರಿಯಪ್ಪ, ನಿಂಗಣ್ಣ, ಚಂದ್ರಪ್ಪ, ನಾಗರಾಜು, ಚಿಕ್ಕಣ್ಣ ಮತ್ತಿತರರು ಭಾಗವಹಿಸಿದ್ದರು.ಫೋಟೊ. 12ಮಾಗಡಿ1:

ಮಾಗಡಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೆಂಪೇಗೌಡರ ಪ್ರತಿಮೆ ಮುಂದೆ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.