ಸಾರಾಂಶ
ಕನ್ನಡಪ್ರಭ ವಾರ್ತೆ, ವಿಧಾನಸಭೆ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಶಾಸನ ರೂಪಿಸುವಂತೆ ಹಾಗೂ ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೆ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಗುರುವಾರ ನಿರ್ಣಯ ಮಂಡಿಸಿ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಯುವೇ ಅಂಗೀಕಾರ ಪಡೆಯಲಾಯಿತು.ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಆರ್ಥಿಕ ಅನ್ಯಾಯ ಖಂಡಿಸಿ ಮಂಡಿಸಿದ ನಿರ್ಣಯದ ಜೊತೆಯಲ್ಲೇ ಕನಿಷ್ಠ ಬೆಂಬಲ ಬೆಲೆಗೆ ಶಾಸಕರ ರೂಪಿಸಲು ಒತ್ತಾಯಿಸುವ ಸಂಬಂಧದ ಮತ್ತೊಂದು ಅಧಿಕೃತ ನಿರ್ಣಯವನ್ನು ಕೂಡ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಗುರುವಾರ ಸದನದಲ್ಲಿ ಏಕಾಏಕಿ ಮಂಡಿಸಿದರು.ಕಾರ್ಯಕಲಾಪದ ಪಟ್ಟಿಯಲ್ಲಿ ಇಲ್ಲದ ವಿಷಯಗಳನ್ನು ಏಕಾಏಕಿ ತಂದಿದ್ದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡುವೆಯೇ ಒಂದರ ನಂತರ ಮತ್ತೊಂದು ನಿರ್ಣಯವನ್ನು ಓದಿದ ಸಚಿವರು ಇದನ್ನು ಅಂಗೀಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದರು. ಬಳಿಕ ಸ್ಪೀಕರ್ ಯು.ಟಿ.ಖಾದರ್ ನಿರ್ಣಯವನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಬಳಿಕವೂ ಪ್ರತಿಭಟನೆ ಮುಂದುವರೆದಿದ್ದರಿಂದ ಸದನವನ್ನು ಸ್ಪೀಕರ್ ಮುಂದೂಡಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಧಾನ ಸಭೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಮತ್ತೆ ಸದನ ಸೇರಿದಾಗಿ ವಿಪಕ್ಷದವರು ಹಾಜರಾಗದ ಕಾರಣ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು. ನಿರ್ಣಯದಲ್ಲೇನಿದೆ? :ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿಯಾಗಬೇಕೆಂಬುದು ಭಾರತ ದೇಶದ ಪ್ರತಿಯೊಬ್ಬ ರೈತನ ಆಶಯ. ಈ ಸದಾಶಯವನ್ನು ಅನುಷ್ಠಾನಗೊಳಿಸಬೇಕೆಂದು ಮತ್ತು ಕೃಷಿಯನ್ನು ಲಾಭದಾಯಕಗೊಳಿಸಬೇಕೆಂಬುದು ಎಲ್ಲಾ ಜನಪರ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳ ಒತ್ತಾಸೆಯಾಗಿದೆ. ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ.50ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವ ಶಿಫಾರಸು ಜಾರಿಗೆ ತರುವಲ್ಲಿ ವಿಫಲವಾಗಿವೆ. ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಲಾಭಾಂಶದ ಬೆಂಬಲ ಬೆಲೆಯನ್ನು ಸುನಿಶ್ಚಿತಗೊಳಿಸುವ (ಗ್ಯಾರಂಟಿ) ಮತ್ತು ರೈತನ ಉತ್ಪನ್ನಗಳ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಿರ್ಧರಿಸುವಂತೆ ಒತ್ತಾಯಿಸಿ, ಭಾರತದಾದ್ಯಂತ ರೈತರು ಚಳವಳಿ, ಆಂದೋಲನ ಮತ್ತು ಹೋರಾಟ ಅನಿವಾರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ರೈತ ವಿರೋಧಿ ನೀತಿಯಾಗಿ ರೈತನಿಗೆ ಕನಿಷ್ಠ ಬೆಂಬಲ ಬೆಲೆ ದೊರಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ. ಈ ಹಿನ್ನೆಲೆಯಲ್ಲಿ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸಕರ್ಳರ ಶಾಸನ ರೂಪಿಸುವಂತೆ ಹಾಗೂ ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂದು ನಿರ್ಣಯ ತರಲಾಗಿದೆ.