ಗದಗ: ಜಿಲ್ಲಾದ್ಯಂತ ಮಂಗಳವಾರ ಸಂಜೆ ಆಲಿಕಲ್ಲು, ಗುಡುಗು, ಮಿಂಚು ಹಾಗೂ ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ. ಅಲ್ಲದೇ ಸಿಡಿಲು ಬಡಿದು ರೈತರೊಬ್ಬರು ಸಾವಿಗೀಡಾಗಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ರೈತರೊಬ್ಬರು ಸಾವಿಗೀಡಾಗಿದ್ದು, ಮೃತ ರೈತರನ್ನು ಮೆಣಸಗಿ ಗ್ರಾಮದ ನಿಂಗಪ್ಪ ರಾಮಪ್ಪ ಅಮಾತಿ(58) ಎಂದು ಗುರುತಿಸಲಾಗಿದೆ. ಸಂಜೆ 5.30ರ ಸುಮಾರಿಗೆ ಹೊಲದಿಂದ ಬರುವಾಗ ಬೆಣ್ಣೆಹಳ್ಳದ ಸಮೀಪ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ರೈತನ ಸಾವಿನಿಂದಾಗಿ ಕುಟುಂಬ ಕಂಗಾಲಾಗಿದ್ದು, ಘಟನೆ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಕೆಲವು ದಿನಗಳಿಂದ ಸೂರ್ಯನ ಪ್ರಖರ ಬಿಸಿಲಿಗೆ ತತ್ತರಿಸಿದ್ದ ಜನತೆಗೆ ಈ ಮಳೆ ತಂಪು ತಂದಿದೆಯಾದರೂ, ಹಲವೆಡೆ ಆಲಿಕಲ್ಲು ಮಳೆಯಾಗಿರುವುದು ಆತಂಕ ಮೂಡಿಸಿದೆ.ರೋಣ ಪಟ್ಟಣದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಶಿರಹಟ್ಟಿಯಲ್ಲೂ ಭಾರಿ ಗಾಳಿ, ಗುಡುಗು ಮಿಂಚಿನೊಂದಿಗೆ ಆಲಿಕಲ್ಲು ಮಳೆ ಸುರಿದಿದೆ.ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾರಿ ಆಲಿಕಲ್ಲು ಮಳೆಯಾಗಿದೆ. ಆರಂಭದಲ್ಲಿ ತುಂತುರು ಹನಿಗಳಾಗಿ ಕಂಡರೂ ನಂತರ ಮಳೆ ಚುರುಕುಗೊಂಡಿದೆ. ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, ಜೋರಾದ ಗಾಳಿಯೊಂದಿಗೆ ಮಳೆ ಸುರಿಯಿತು.
ಗಜೇಂದ್ರಗಡ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೆಲ ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ. ನರಗುಂದ ಭಾಗದಲ್ಲಿ ಮಳೆಯಾಗಿಲ್ಲದಿದ್ದರೂ ಜೋರಾದ ಗಾಳಿ ಬೀಸುತ್ತಿತ್ತು. ಗದಗ ನಗರದಲ್ಲಿಯೂ 20 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾಗಿದೆ.ವಿದ್ಯುತ್ ವ್ಯತ್ಯಯ: ಮುಂಡರಗಿಯಲ್ಲಿ ಗಾಳಿ ಸಹಿತ ಮಳೆಯ ಆರ್ಭಟಕ್ಕೆ ಪದೇ ಪದೇ ವಿದ್ಯುತ್ ಸ್ಥಗಿತಗೊಂಡು ಸಾರ್ವಜನಿಕ ಜೀವನಕ್ಕೆ ಅಲ್ಪಮಟ್ಟಿನ ವ್ಯತ್ಯಯ ಉಂಟಾಯಿತು. ಒಟ್ಟಾರೆಯಾಗಿ ಜಿಲ್ಲೆಯ ಜನರಿಗೆ ಬಿಸಿಯಿಂದ ಮುಕ್ತಿ ಸಿಕ್ಕಿದ್ದರೂ, ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ಆಲಿಕಲ್ಲು ಸಮೇತ ವರುಣನ ಆರ್ಭಟ
ರೋಣ: ಪಟ್ಟಣ ಸೇರಿದಂತೆ ತಾಲೂಕಿನ ಕೊತಬಾಳ, ಮುಗಳಿ, ಕೃಷ್ಣಾಪುರ, ಬಾಸಲಾಪುರ ಸೇರಿದಂತೆ ವಿವಿಧೆಡೆ ಮಂಗಳವಾರ ಸಾಯಂಕಾಲ ಅರ್ಧ ಗಂಟೆಗೂ ಹೆಚ್ಚು ಕಾಲ ರಭಸದ ಗಾಳಿ, ಗುಡುಗು ಸಮೇತ ಆಲಿಕಲ್ಲು ಮಳೆಯಾಗಿದೆ.
ಕಳೆದ ಕೆಲ ದಿನಗಳಿಂದ ಬಿರು ಬೇಸಿಗೆಗೆ ಬೇಸತ್ತಿದ್ದ ಜನತೆಗೆ ಮಂಗಳವಾರ ಮಳೆ ಸುರಿದಿದ್ದು ತಂಪೆರದಿದೆ. ಆದರೆ ರೈತರಿಗೆ ಮಳೆ ಕೊಂಚ ಬೇಸರ ಮೂಡಿಸಿದೆ.
ಹೊಲದಲ್ಲಿ ಬಿಳಿಜೋಳ, ಗೋದಿ ರಾಶಿ ಮಾಡಲಾಗಿದ್ದು, ಮೇವು, ಹೊಟ್ಟು ಮಳೆಗೆ ಸಿಕ್ಕು ಉಪಯೋಗಕ್ಕೆ ಬಾರದಂತಾಗುತ್ತದೆ. ಕೆಲವೆಡೆ ಮೇವಿನ ಬಣವೆಗೆ ಸಿದ್ಧತೆ ಮಾಡುತ್ತಿದ್ದು, ಅರ್ಧಕ್ಕೆ ನಿಂತಿರುವ ಬಣವೆಯಲ್ಲಿನ ಹೊಟ್ಟು ಮತ್ತು ಮೇವು ಒದ್ದೆಯಾಗುವುದೆಂಬ ಚಿಂತೆ ರೈತರನ್ನು ಕಾಡುತ್ತಿದೆ.