ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಧಾರವಾಡ, ಹಾವೇರಿ, ಗದಗ ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಧಾರವಾಡ, ಹಾವೇರಿ, ಗದಗ ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.ಕಲಬುರಗಿ ಜಿಲ್ಲೆ ಚಿಂಚೋಳಿ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು, ಶಾದಿಪುರ ತಾಂಡಾದಲ್ಲಿ ಯುವ ರೈತ ಮಹೇಶ ಚೌವ್ಹಾಣ್ (24) ಸಿಡಿಲಿಗೆ ಬಲಿಯಾಗಿದ್ದಾರೆ. ಜಮೀನಿನಲ್ಲಿ ಕಬ್ಬು ನಾಟಿ ಮಾಡುತ್ತಿರುವಾಗ ಸಿಡಿಲು ಬಡಿಯಿತು. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಸಿಡಿಲು ಬಡಿದು, ನಾಲ್ವರು ಕೃಷಿ ಕಾರ್ಮಿಕರು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಜೋಳದ ರಾಶಿ ಮಾಡುತ್ತಿದ್ದ ವೇಳೆ ದಿಢೀರ್ ಸಿಡಿಲು ಬಡಿಯಿತು.
ಬೆಳಗಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿದು, ಜನಜೀವನ ಅಸ್ತವ್ಯಸ್ತವಾಗಿತ್ತು. ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ನದಿಯಂತೆ ಭಾಸವಾಗುತ್ತಿದ್ದವು. ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಬೇಕಾಯಿತು. ಭಾರೀ ಮಳೆಯ ಪರಿಣಾಮ ನವೀಕರಣಗೊಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಮೊದಲ ಮಹಡಿಗೆ ನೀರು ನುಗ್ಗಿ ಸಿಬ್ಬಂದಿ ಮತ್ತು ಸಾರ್ವಜನಿಕರು ತೊಂದರೆ ಅನಭವಿಸುವಂತಾಯಿತು. ಲೆಕ್ಕಪತ್ರ ವಿಭಾಗ, ಗಣಕಯಂತ್ರ ವಿಭಾಗ, ಸಾರ್ವಜನಿಕರ ನಿರೀಕ್ಷಣಾ ಕೋಣೆ, ಇಂಟರ್ನೆಟ್ ರೂಮ್ ಸೇರಿದಂತೆ ಹಲವು ಕೊಠಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಕೆಲವು ಸಿಬ್ಬಂದಿ ಕುರ್ಚಿಗಳನ್ನು ಖಾಲಿ ಮಾಡಿ ಹೊರಬಂದರೆ, ಇನ್ನೂ ಕೆಲವರು ನೀರಿನಲ್ಲೇ ಕುಳಿತು ಕೆಲಸ ನಿರ್ವಹಿಸಿದರು.ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತಿತರ ಪ್ರದೇಶದಲ್ಲಿ ಸಂಜೆ 6.30 ರ ಹೊತ್ತಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಳಿಕ ರಾತ್ರಿ 9 ಗಂಟೆಯ ಹೊತ್ತಿಗೆ ಮತ್ತೆ ಬಿರುಸಿನ ಮಳೆ ಆರಂಭವಾಯಿತು. ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿತ್ತು. ಮಳೆಯಿಂದ ರೈತರು ಬೆಳೆದ ಹಿಂಗಾರಿ ಬೆಳೆಗಳಿಗೆ ತೀವ್ರ ಹಾನಿ ಸಂಭವಿಸಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣ, ಮೋಟೆಬೆನ್ನೂರು, ಹಾನಗಲ್ಲ, ಹಿರೇಕೆರೂರು, ಹಾವೇರಿಯಲ್ಲಿ ಗಾಳಿ, ಗುಡುಗು ಮಿಂಚಿನೊಂದಿಗೆ ಮಳೆಯಾಗಿದ್ದು, ಹಾವೇರಿ ನಗರದ ಹೊರವಲಯದಲ್ಲಿರುವ ಅಲೆಮಾರಿ ಕುಟುಂಬಗಳ 4ಕ್ಕೂ ಹೆಚ್ಚು ಗುಡಿಸಲುಗಳಿಗೆ ಹಾನಿಯಾಗಿದೆ. ಬ್ಯಾಡಗಿ, ಹಾನಗಲ್ಲ ತಾಲೂಕುಗಳಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದೆ. ಸುಮಾರು ಒಂದು ಗಂಟೆ ಕಾಲ ಭಾರಿ ಮಳೆಯಾಗಿದ್ದು, ವಾತಾವರಣ ತಂಪಾಗಿದೆ. ಬ್ಯಾಡಗಿ ಪಟ್ಟಣದಲ್ಲಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಸಮಸ್ಯೆ ಎದುರಿಸುವಂತಾಯಿತು. ಮೋಟೆಬೆನ್ನೂರ ಭಾಗದಲ್ಲಿ ಸಹ ಭಾರಿ ಗಾಳಿಯೊಂದಿಗೆ ಕೆಲಕಾಲ ಆಲಿಕಲ್ಲು ಮಳೆಯಾಗಿದೆ.ಗದಗ ಜಿಲ್ಲಾದ್ಯಂತ ಬಿರುಗಾಳಿ ಸಮೇತ ಉತ್ತಮ ಮಳೆಯಾಗಿದೆ. ಮುಂಡರಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೆಯ ವೇಳೆ ಭಾರೀ ಗಾಳಿ, ಮಳೆಯಿಂದಾಗಿ ಮನೆ, ಶಾಲೆ ಇತರ ಕಟ್ಟಡಗಳ ಹೆಂಚು ಮತ್ತು ಶೀಟುಗಳು ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ತಾಲೂಕಿನ ವಿವಿಧೆಡೆ ಬಿದ್ದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದಾಗಿ ನೂರಾರು ಅಡಕೆ ಮತ್ತು ತೆಂಗಿನ ಗಿಡಗಳು ನೆಲಕ್ಕುರುಳಿವೆ. ಮತ್ತೊಂದೆಡೆ ಭತ್ತದ ಗದ್ದೆಗಳು ಆಲಿಕಲ್ಲು ಹೊಡೆತಕ್ಕೆ ನೆಲಕಚ್ಚಿವೆ.ತೀರ್ಥಹಳ್ಳಿ ಸಮೀಪದ ಬಾಳೆಬೈಲಿನ ಕವಿತಾ ಹೋಟೆಲ್ ಮುಂಭಾಗ ಮರವೊಂದು ಧರೆಗುರುಳಿದ್ದು, ಆಗುಂಬೆ-ತೀರ್ಥಹಳ್ಳಿ ಮಾರ್ಗದ ವಾಹನ ಸಂಚಾರಕ್ಕೆ ಅಡ್ಡಿಯಾಗಿ, ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಿವಮೊಗ್ಗ–ಸಾಗರ ಮುಖ್ಯ ರಸ್ತೆಯ ತುಪ್ಪೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.