- ಸರ್ಕಾರದ ಕ್ರಮಕ್ಕೆ ಭಾರತೀಯ ರೈತ ಒಕ್ಕೂಟ ಮುಖಂಡ ಎಚ್.ಆರ್.ಲಿಂಗರಾಜ ಇತರರ ಆಕ್ಷೇಪ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಅಚ್ಚುಕಟ್ಟು ರೈತರನ್ನು ಸಂಕಷ್ಟಕ್ಕೀಡು ಮಾಡಿ, ಬೇರೆ ಜಿಲ್ಲೆಗಳಿಗೆ ನೀರೊದಗಿಸುವ ಕೆಲಸಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಭಾರತೀಯ ರೈತ ಒಕ್ಕೂಟ ಭದ್ರಾ ಶಾಖೆ ತೀವ್ರವಾಗಿ ಆಕ್ಷೇಪಿಸಿದೆ.

ದಾವಣಗೆರೆ ಜೀವನಾಡಿ ಭದ್ರಾ ಅಣೆಕಟ್ಟೆಯ ಮೇಲ್ಭಾಗದಲ್ಲಿ ಮಾಗುಂಡಿ ಬಳಿ ಅಣೆಕಟ್ಟೆ ನಿರ್ಮಿಸಿದರೆ ಮಾತ್ರವೇ ಭದ್ರಾ ಮೇಲ್ದಂಡೆಯಾಗುತ್ತದೆ. ಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 71.535 ಟಿಎಂಸಿಗಳಲ್ಲಿ 13.83 ಟಿಎಂಸಿ ನೀರು ಬಳಕೆಗೆ ಬರುವುದಿಲ್ಲ. ಮುಂಗಾರು ಹಂಗಾಮಿನ ಬೆಳೆಗೆ 32.62 ಟಿಎಂಸಿ, ಬೇಸಿಗೆ ಬೆಳೆಗೆ 36.84 ಟಿಎಂಸಿ, ಕೈಗಾರಿಕೆಗೆ 8.50 ಟಿಎಂಸಿ, ಆವಿಯಾಗುವ ನೀರು 3.43 ಟಿಎಂಸಿ ಆಗಿರುತ್ತದೆ ಎಂದು ಒಕ್ಕೂಟ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಕೊಂಡಜ್ಜಿ ಶಾನುಬೋಗರ ನಾಗರಾಜ ರಾವ್ ಇತರರು ತಿಳಿಸಿದ್ದಾರೆ.

ಜಲಚರಗಳು ಮತ್ತು ಜಲಾಶಯಗಳಿಗೆ ಸುಮಾರು 4 ಟಿಎಂಸಿ ನೀಡು, ಕುಡಿಯಲು ತುರ್ತು ಪರಿಸ್ಥಿತಿಗೆ ಕಾಯ್ದಿಸಲು 1.53 ಟಿಎಂಸಿ ನೀರು, ಭದ್ರಾ ಮೇಲ್ದಂಡೆ ಯೋಜನೆಗೆ 12.40 ಟಿಎಂಸಿ, ಮೈಲಾರದ ಜಾತ್ರೆಗೆ 2 ಟಿಎಂಸಿ ನೀರು, ಹೊಸದುರ್ಗ-ಹೊಳಲ್ಕೆರೆ, ಚಿತ್ರದುರ್ಗ ಮತ್ತಿತರೆ ಪ್ರದೇಶಗಳಿಗೆ ನಿತ್ಯವೂ 30 ಕ್ಯೂಸೆಕ್ ನೀರು, ವರ್ಷಕ್ಕೆ ಸುಮಾರು 3 ಟಿಎಂಸಿ ನೀರು ಗದಗ- ಬೆಟಗೇರಿ ಮತ್ತಿತರೆ ಪ್ರದೇಶ, ಜಿಲ್ಲೆಗಳಿಗೆ ಬೇಸಿಗೆಕಾಲದಲ್ಲಿ ನದಿ ಮೂಲಕ ಹರಿಸುವಂತೆ ಎಲ್ಲಾ ಸರ್ಕಾರಗಳು ತೀರ್ಮಾನಿಸುತ್ತಾ ಬಂದಿವೆ. ಇಷ್ಟೆಲ್ಲಾ ನೀರು ಹರಿಸಿದರೂ ಅಚ್ಚುಕಟ್ಟು ಕೊನೆ ಭಾಗದ ಸುಮಾರು 40 ಸಾವಿರ ಎಕರೆಗೆ ಇಂದಿಗೂ ನೀರು ತಲುಪಿಸಲಾಗುತ್ತಿಲ್ಲ ಎಂದು ದೂರಿದ್ದಾರೆ.


ಹಿಂದಿನ ಸರ್ಕಾರ ತುಂಗಾದಿಂದ ನೀಲನ್ನು ಮುತ್ತಿನ ಕೊಪ್ಪಕ್ಕೆ ಲಿಫ್ಟ್ ಮಾಡಿ, ಭದ್ರಾ ಡ್ಯಾಂಗೆ ಹರಿಸುವುದಾಗಿ, ಭದ್ರಾ ಅಚ್ಚುಕಟ್ಟು ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆಂಬ ಸರ್ಕಾರದ ಭರವಸೆಗಳು ಇಂದಿಗೂ ಭರವಸೆಯಾಗಿದೆ. ಮುತ್ತಿನಕೊಪ್ಪಕ್ಕೆ ನೀರೆತ್ತುವ ಕೆಲಸ ಪೂರ್ಣ ಕೆಲಸ ಮಾಡಿ, ಕೊನೆಯ ಭಾಗಕ್ಕೆ ನೀರು ಹರಿಸುವಂತೆ ಮಾಡಿ, ನಂತರ ಬೇರೆ ಚಿಂತನೆ ನಡೆಸಲಿ. ಭದ್ರಾ ಅಣೆಕಟ್ಟೆಯು ನಿರ್ಮಾಣವಾಗಿ ಆರೂವರೆ ದಶಕಗಳೇ ಆಗಿವೆ. ಈವರೆಗೆ ಕೇವಲ 7 ಸಲ ಮಾತ್ರವೇ ಭದ್ರಾ ಡ್ಯಾಂ ತುಂಬಿರುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಭದ್ರಾ ಡ್ಯಾಂ ಸಹ ಈಗಾಗಲೇ ಹಳೆಯದಾಗುತ್ತ ಬಂದಿದೆ. ಡ್ಯಾಂನ ಗೇಟುಗಳು ದುರಸ್ತಿಯನ್ನೇ ಕಂಡಿಲ್ಲ. ಇಂದಿಗೂ ನಾಲೆಗಳ ದುರಸ್ತಿಯಾಗಿಲ್ಲ. ಇದನ್ನೆಲ್ಲಾ ಮನಗಂಡು ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ನೀರು ಮುಟ್ಟಿಸುವ ಚಿಂತನೆ ಮಾಡುವ ಕೆಲಸ ಸರ್ಕಾರದಿದಂ ಆಗಲಿ. ಬೇರೆ ಪ್ರದೇಶಗಳಿಗೆ ನೀರು ಕೊಡುವ ನೆಪದಲ್ಲಿ ದಾವಣಗೆರೆ ಸೇರಿದಂತೆ ಭದ್ರಾ ಡ್ಯಾಂ ಅವಲಂಭಿತ ಜಿಲ್ಲೆಗಳ ಅಚ್ಚುಕಟ್ಟು ರೈತರನ್ನು ಸಂಕಷ್ಟಗಳ ಸರಣಿಗೆ ನೂಕಬಾರದು ಎಂದು ಒಕ್ಕೂಟದ ಎ.ಎಂ. ಮಂಜುನಾಥ, ಕುಂದುವಾಡ ಮಹೇಶ, ಪುನೀತ್, ಹನುಮಂತಪ್ಪ, ಅಜ್ಜಣ್ಣ, ಶಿವಪ್ಪ ಇತರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

- - -

(ಸಾಂದರ್ಭಿಕ ಚಿತ್ರ)