ಸಿದ್ದಾಪುರ: ಕಾಡಾನೆ ದಾಳಿಗೆ ಬೆಳೆಗಾರರೊಬ್ಬರು ಸಾವನ್ನಪ್ಪಿರುವ ಘಟನೆ ಸಿದ್ದಾಪುರದ ಬಿಜಿಎಸ್ ಶಿಕ್ಷಣ ಸಂಸ್ಥೆ ಸಮೀಪದ ನಡೆದಿದೆ. ಚೌರಿರ ಕುಟುಂಬಕ್ಕೆ ಸೇರಿದ ಡಿ. ಗಣಪತಿ (ಗಪ್ಪು 49) ಎಂಬುವವರೇ ಆನೆ ದಾಳಿಗೆ ಸಿಲುಕಿ ಮೃತಪಟ್ಟ ರ್ದುದೈವಿ.
ತನ್ನ ಕಾಫಿ ತೋಟದಲ್ಲಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ಗಣಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿ, ಸಿದ್ದಾಪುರ ಠಾಣಾಧಿಕಾರಿ ಸೇರಿದಂತೆ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಿದ್ದಾಪುರ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯೆ ಜಲಜಾಕ್ಷಿ ಎಂಬವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಈ ಸಾವು ಮಾಸುವ ಮುನ್ನವೇ ಸಿದ್ದಾಪುರ ವ್ಯಾಪ್ತಿಯಲ್ಲಿ ಬೆಳೆಗಾರ ಆನೆ ದಾಳಿಗೆ ಸಾವನ್ನಪ್ಪಿದ್ದಾರೆ.ಪ್ರತಿಭಟನೆ: ಹಾಡಗಲೇ ಕಾಫಿ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದರು. ಆನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲಗೊಂಡಿದೆ ಎಂದು ಆರೋಪಿಸಿರುವ ಸಾರ್ವಜನಿಕರು ಬೆಳೆಗಾರರು ಸಿದ್ದಾಪುರ ಆಸ್ಪತ್ರೆಯ ಶವಗಾರದ ಮುಂದೆ ಪ್ರತಿಭಟನೆ ನಡೆಸಿದರು. ಆನೆ ಹಾವಳಿ ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅರಣ್ಯ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಸ್ಥಳಕ್ಕಾಗಮಿಸಿ ಕಾಡಾನೆ ದಾಳಿ ತಡಗಟ್ಟಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.