ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ರೈತ ಮೇರ್ಚಾ ಆಗ್ರಹ

| Published : May 24 2024, 12:51 AM IST

ಸಾರಾಂಶ

ಕೇಂದ್ರ ಸರ್ಕಾರವು ರಾಜ್ಯಕ್ಕೆ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಬೆರಳೆಣಿಕೆಯಷ್ಟೇ ರೈತರಿಗೆ ಮಾತ್ರ ನೀಡಿದೆ. ಮುಂಗಡ ನೀಡಿದ್ದ 2 ಸಾವಿರ ರುಗಳನ್ನು ಇದಕ್ಕೆ ಸೇರಿಸದೆ ಪರಿಹಾರ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಕಾಂಗ್ರೆಸ್ ಸರ್ಕಾರವು ಕೂಡಲೇ ರೈತರಿಗೆ ೨೦೨೩-೨೪ ನೇ ಸಾಲಿನ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮೆ ಮಾಡುವಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿಗೆ ಮನವಿ ಸಲ್ಲಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೊಮ್ಮನಹಳ್ಳಿ ಆರ್.ಆನಂದ್ ಮಾತನಾಡಿ, ರಾಜ್ಯದಲ್ಲಿ ಹಿಂದಿನ ವರ್ಷ ಮಳೆಯ ಕೊರತೆಯಿಂದ ಬರಗಾಲ ಸೃಷ್ಟಿಯಾಗಿದ್ದು, ರೈತರು ಸೇರಿದಂತೆ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದರು.

ರೈತರಿಗೆ ಪರಿಹಾರ ನೀಡಿ

ರಾಜ್ಯ ಸರ್ಕಾರವು ಕೂಡಲೇ ಸಮರೋಪಾದಿಯಲ್ಲಿ ಕೆಲಸ ಮಾಡಿ ಪರಿಹಾರವನ್ನು ರೈತರಿಗೆ ನೀಡಬೇಕಾಗಿದೆ, ಈಗಾಗಲೇ ಕೇಂದ್ರ ಸರ್ಕಾರವು ೩೪೫೪ ಕೋಟಿ ರೂ.ಗಳ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ ಮಾಡಿದ್ದು ರಾಜ್ಯ ಸರಕಾರವು ಬೆರಳೆಣಿಕೆಯಷ್ಟೇ ರೈತರಿಗೆ ಮಾತ್ರ ನೀಡಿದ್ದು ಕೂಡಲೇ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಎಲ್ಲ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ರೈತರಿಗೆ ಮುಂಗಡವಾಗಿ ಕೊಟ್ಟಿದ್ದ ಎರಡು ಸಾವಿರ ರು.ಗಳನ್ನು ಬಿಟ್ಟು ಉಳಿದ ಹಣವನ್ನು ಜಮೆ ಮಾಡಿದೆ ಇದು ಸರಿಯಲ್ಲ ಎಂದರು. ಜಿಲ್ಲೆಯ ಜನ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದು ಹಾಲು ಉತ್ಪಾದಕರಿಗೆ ಸುಮಾರು ಎಂಟು ತಿಂಗಳಿಂದ ಪೋತ್ಸಾಹಧನ ಬಿಡುಗಡೆ ಮಾಡಿಲ್ಲ ಕಳೆದ ವರ್ಷವೂ ಬರಗಾಲವಿದ್ದ ಕಾರಣ ಜಾನುವಾರುಗಳಿಗೆ ಮೇವು ಖರೀದಿಸಲು ಆಗಿರಲಿಲ್ಲ. ಕೃಷಿ ಚಟುವಟಿಕೆ ನಡೆಯದ ಕಾರಣ ಕೃಷಿ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಮಸ್ಯೆಯಾಗಿದೆ. ಆದ್ದರಿಂದ ಸರ್ಕಾರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಕೃಷಿ ಸಂಬಂಧಿತ ಅನುದಾನ ಸ್ಥಗಿತ

ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಿವಣ್ಣ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಬದಲಾವಣೆಗೆ ಹಿಂದೆ ಇದ್ದ ೨೫ ಸಾವಿರದಿಂದ ಒಂದುವರೆ ಲಕ್ಷಕ್ಕೆ ಏರಿಕೆ ಮಾಡಿದೆ. ಜೊತೆಗೆ ಪ್ರತಿ ಯೂನಿಟ್ ಮೇಲೆ ೮ ರೂಪಾಯಿ ಹೆಚ್ಚಳ ಮಾಡಿದೆ. ಕೃಷಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗೆ ಅನುದಾನವನ್ನು ನಿಲ್ಲಿಸಿದ್ದು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಪ್ಪ, ಬೆಳ್ಳಾವಿ ಸೋಮಣ್ಣ,, ಉಪಾಧ್ಯಕ್ಷರಾದ ಗೋಪಸಂದ್ರ ನಾರಾಯಣಸ್ವಾಮಿ, ಹುಣಸಿಕೋಟೆ ಶ್ರೀನಿವಾಸ್, ಸತೀಶ್ ಗೌಡ, ಖಜಾಂಚಿ ಪಿ.ವೆಂಕಟೇಶ್, ಕಾರ್ಯದರ್ಶಿ ಚಲಪತಿ ಮುಖಂಡರಾದ ಬೀಸೇಗೌಡ, ಓಹಿಲೇಶ್, ಅಗ್ರಹಾರ ರಂಗೇಶ್, ಬೈಪನಹಳ್ಳಿ ನಾರಾಯಣಸ್ವಾಮಿ, ಅಶ್ವಥ್ ಗೌಡ, ವೆಂಕಟೇಶ್ ಗೌಡ, ಪ್ರಶಾಂತ್ ಕಮಾರ್, ನಾಗರಾಜರೆಡ್ಡಿ ಇದ್ದರು.