ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿ ಭೂಮಿಗೆ ಬಳಸುವ ರಾಸಾಯನಿಕ ಗೊಬ್ಬರದಿಂದ ಮಣ್ಣು ವಿಷಕಾರಿಯಾಗುತ್ತಿದ್ದು, ಸಾವಯವ (ಕೊಟ್ಟಿಗೆ) ಗೊಬ್ಬರವನ್ನು ಬಳಸುವ ಸಹಜ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ರೈತ ದಸರಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಿಂದ ಅಲಂಕರಿಸಿದ್ದ ರಾಗಿ ಕಣಕ್ಕೆ ಪೂಜೆ ನೆರವೇರಿಸಿ, ರೈತನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ದೇಶದಲ್ಲಿ ಏರುತ್ತಿರುವ ಜನಸಂಖ್ಯೆಗನುಗುಣವಾಗಿ ನಾವು ಆಹಾರವನ್ನು ದ್ವಿಗುಣಗೊಳಿಸಬೇಕಾಗಿದೆ. ಕೃಷಿಭೂಮಿಗೆ ರಾಸಾಯನಿಕ ಗೊಬ್ಬರವನ್ನು ಯಥೇಚ್ಛವಾಗಿ ಬಳಸುವುದಲ್ಲದೆ, ಬೆಳೆಗಳಿಗೆ ಸಿಂಪಡಿಸುವ ಔಷಧಿಯು ವಿಷಕಾರಿಯಾಗಿದೆ. ಇದು ಆರೋಗ್ಯಕ್ಕೆ ಹಾನಿಕರ. ಹೆಚ್ಚು ವಿಷ ಉಣಿಸಿದಷ್ಟು ಭೂಮಿ ನಮಗೂ ವಿಷ ಉಣಿಸಲಿದೆ. ಈ ನಿಟ್ಟಿನಲ್ಲಿ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಕಾರ್ಯಾಗಾರ ಏರ್ಪಡಿಸಿ ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ರೈತ ದಸರಾ ಇದೊಂದು ಸುಂದರ ಕಾರ್ಯಕ್ರಮ. ಮೈಸೂರಿನಿಂದ ಪ್ರತ್ಯೇಕ ಜಿಲ್ಲೆಯಾದ ಬಳಿಕ 9ನೇ ಚಾಮರಾಜ ಒಡೆಯರ್ ಜನ್ಮತಳೆದ ಚಾಮರಾಜನಗರದಲ್ಲೂ ದಸರಾ ನಡೆಸುವ ಸದುದ್ದೇಶ ಔಚಿತ್ಯಪೂರ್ಣವಾಗಿದೆ. ರೈತರೊಂದಿಗೆ ನಾವೆಲ್ಲರೂ ಬೆರೆಯುವ ಅವಕಾಶವನ್ನು ರೈತ ದಸರಾ ಒದಗಿಸಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಬಗ್ಗೆ ಹೋಬಳಿ ಮಟ್ಟದಲ್ಲಿ ರೈತರಿಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಡೀಸಿ ಶಿಲ್ಪಾನಾಗ್ ಮಾತನಾಡಿ, ರೈತ ದಸರಾ ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ಒಂದು ಭಾಗವಾಗಿದೆ. ರೈತರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಗಟ್ಟಿಗೊಳಿಸಲು ರೈತ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜೈ ಜವಾನ್, ಜೈ ಕಿಸಾನ್, ರೈತರು ದೇಶದ ಬೆನ್ನುಲುಬು. ನಾವು ಸಹ ರೈತ ಕುಟುಂಬದಿಂದ ಬಂದವರು. ಅನ್ನ ನೀಡುವ ರೈತರಿಂದಲೇ ನಾವೆಲ್ಲರೂ ಬದುಕಬೇಕಾಗಿದೆ. ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಲಾಗಿದೆ. ರೈತ ದಸರಾ ಪ್ರಯುಕ್ತ ಏರ್ಪಡಿಸಲಾಗಿರುವ ತಾಂತ್ರಿಕ ಕಾರ್ಯಾಗಾರವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರೈತಗೀತೆಯನ್ನು ಉಲ್ಲೇಖಿಸಿ ಮಾತನಾಡಿದ ಎಸ್ಪಿ ಡಾ.ಬಿ.ಟಿ.ಕವಿತ ಅವರು, ಕಾಯಕ ಗುಣ, ಶ್ರದ್ಧೆ ರೈತರಿಗೆ ತಂತಾನೆ ಬಂದಿದೆ. ತಾವು ಬೆಳೆದು ಇತರರ ಹೊಟ್ಟೆ ತುಂಬಿಸುವ ರೈತರ ಕಾಯಕ ಸಂಸ್ಕೃತಿ ಶ್ರೇಷ್ಠವಾದದ್ದು. ಇತ್ತೀಚೆಗೆ ಪ್ರತಿಯೊಂದು ಆಹಾರವು ಕಲಬೆರಕೆಯಾಗುತ್ತಿದ್ದು, ಇದನ್ನು ತಡೆಯಲು ರೈತರು ಬೆಳೆದ ಆಹಾರ ಪದಾರ್ಥಗಳನ್ನು ನೇರವಾಗಿ ರೈತರಿಂದಲೇ ಖರೀದಿಸುವುದು ಉತ್ತಮ ಎಂದರು.ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, ಸರ್ವರೋಗಕ್ಕೂ ಆಹಾರಕ್ರಮವೇ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದ ಭೂಮಿಯ ಆಯುಸ್ಸು ಕ್ಷೀಣಿಸುತ್ತಿದ್ದು, ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಿ ನೀರು ಉಳಿವಿಗೆ ರೈತರು ಮುಂದಾಗಬೇಕಿದೆ. ಸಾವಯವ ಇಂಗಾಲವನ್ನು ವೃದ್ಧಿಸಬೇಕಿದೆ. ಗರಿಕೆಯಿಂದ ಹಿಡಿದು ಎಲ್ಲವೂ ಸಿರಿಧಾನ್ಯಗಳೇ ಆಗಿವೆ. ನಾವು ಆಹಾರವನ್ನು ನಮಗೋಸ್ಕರ ಬೆಳೆಯಬೇಕಾಗಿದ್ದು, ಮಾರುಕಟ್ಟೆಯನ್ನು ನಾವೇ ಹುಡುಕಿಕೊಳ್ಳಬೇಕಾಗಿದೆ. ಮಾರುಕಟ್ಟೆ ಕ್ರಾಂತಿಯೂ ಆಗಬೇಕಾಗಿದೆ. ಕೃಷಿ ವ್ಯವಸ್ಥೆ ಉದ್ದಿಮೆಯಾಗಿ ಪರಿವರ್ತನೆಯಾಗಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಉಪಾಧ್ಯಕ್ಷೆ ಮಮತ, ರೈತ ಮುಖಂಡರಾದ ಅಣಗಳ್ಳಿ ಬಸವರಾಜು, ನಾಗಪ್ಪ ಅವರು ಕಾರ್ಯಕ್ರಮದಲ್ಲಿ ರೈತ ದಸರಾ ಉದ್ದೇಶದ ಕುರಿತು ಮಾತನಾಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್, ಉಪನಿರ್ದೇಶಕಿ ಸುಷ್ಮಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯ್ಡು, ರೈತ ಮುಖಂಡರಾದ ಗುಂಡ್ಲುಪೇಟೆಯ ಸಂಪತ್, ಶಿವಪುರ ಮಹದೇವಪ್ಪ, ಹೊನ್ನೂರು ಬಸವಣ್ಣ, ಸಿ.ಸಿದ್ದರಾಜು, ಬಸವರಾಜು, ರಾಮಕೃಷ್ಣ, ಅಮ್ಜದ್ ಖಾನ್, ಕೃಷಿ ಯಂತ್ರೋಪಕರಣಗಳ ಮಾರಾಟ ಸಂಘದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಹೊರ ಆವರಣದಲ್ಲಿ ಕೃಷಿ ಸಂಬಂಧಿತ ವಿವಿಧ ಇಲಾಖೆಗಳು ತೆರೆದಿದ್ದ ಮಳಿಗೆಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಶಾಸಕರು ಹಾಗೂ ಗಣ್ಯರು ವೀಕ್ಷಿಸಿದರು.ಅದ್ಧೂರಿ ಮೆರವಣಿಗೆ
ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಲಾಗಿದ್ದ ‘ರೈತ ದಸರಾ’ ಪ್ರಯುಕ್ತ ಆಕರ್ಷಕ ಜಾನಪದ ಕಲಾತಂಡಗಳು, ಅಲಂಕೃತ ಎತ್ತಿನ ಗಾಡಿಗಳು, ಕೃಷಿ ಸಂಬಂಧಿತ ಇಲಾಖೆಗಳ ಸ್ತಬ್ಧಚಿತ್ರಗಳಿಂದ ಅದ್ಧೂರಿ ಮೆರವಣಿಗೆ ನಡೆಯಿತು. ಶ್ರೀ ಚಾಮರಾಜೇಶ್ವರ ದೇಗುಲದಿಂದ ಆರಂಭವಾದ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಎತ್ತಿನ ಗಾಡಿ ಓಡಿಸುವ ಮೂಲಕ ಚಾಲನೆ ನೀಡಿದರು.ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ವೀರಗಾಸೆ, ಗೊರವರ ಕುಣಿತ, ಹುಲಿವೇಷ, ಕಂಸಾಳೆ ಕಲಾವಿದರ ತಂಡಗಳು ಮೆರವಣಿಗೆಗೆ ಆಕರ್ಷಕ ಮೆರುಗು ನೀಡಿದವು. ಕಬ್ಬು, ಬಾಳೆ, ತಳಿರು, ತೋರಣಗಳಿಂದ ಅಲಂಕೃತಗೊಂಡಿದ್ದ ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಅಲ್ಲದೆ ಕೃಷಿ ಸಂಬಂಧಿತ ವಿವಿಧ ಇಲಾಖೆಗಳಾದ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳ ಸ್ತಬ್ದಚಿತ್ರಗಳು ಮೆರವಣಿಗೆಯ ಅಂದ ಹೆಚ್ಚಿಸಿದ್ದವು.