ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಿಪಟೂರು ಖರೀದಿ ಕೇಂದ್ರದ ಸಮಸ್ಯೆ ಬಗೆ ಹರಿದ ಬೆನ್ನಲ್ಲೆ ತುರುವೇಕೆರೆ ಖರೀದಿ ಕೇಂದ್ರದಲ್ಲೂ ಸಹ ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡುವ ಸಲುವಾಗಿ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಲು ಹರಸಾಹಸಪಡುತ್ತಿದ್ದಾರೆ.ಒಂದು ಎಕರೆಗೆ ೧೦ ಕ್ವಿಂಟಾಲ್ ರಾಗಿಯಂತೆ ಗರಿಷ್ಟ ೨೦ ಕ್ವಿಂಟಾಲ್‌ತನಕ ರಾಗಿ ಮಾರಲು ಅವಕಾಶವಿದೆ. ಹಾಗಾಗಿ ರೈತರು ನೋಂದಣಿ ಮಾಡಿಸಲು ಫ್ರೂಟ್ ಐಡಿ, ಆಧಾರ್ ಮತ್ತು ಬಯೋ ಮೆಟ್ರಿಕ್ ಮಾಡುವುದು ಕಡ್ಡಾಯವಾಗಿದೆ. ನೋಂದಣಿ ಅವಧಿ ಮುಗಿದು ಹೋಗಬಹುದೆಂಬ ಆತಂಕದಿಂದ ರೈತರು ತಾಲೂಕಿನ ವಿವಿಧ ಭಾಗಗಳಿಂದ ಕೊರೆಯುವ ಚಳಿಯಲ್ಲೇ ಬಂದು ರಾಗಿ ನೋಂದಣಿ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಕೆಲ ರೈತರು ಸರತಿ ಕೈತಪ್ಪುವುದೆಂದು ನಿಂತ ಸ್ಥಳದಲ್ಲೇ ಕೂತು ತಿಂಡಿ ತಿನ್ನುತ್ತಿದ್ದರೆ, ಕೆಲವೊಂದಿಷ್ಟು ರೈತರು ಹಿಂದೆ ಮತ್ತು ಮುಂದಿನ ರೈತರಿಗೆ ಹೇಳಿ ತಿಂಡಿ ತಿಂದು ಬಂದು ಮತ್ತೆ ಸರತಿಯಲ್ಲಿರುವ ಮತ್ತೊಬ್ಬ ರೈತರನ್ನು ಊಟ, ತಿಂಡಿಗೆ ಕಳುಹಿಸುತ್ತಿದ್ದದು ಕಂಡು ಬಂದಿತು. ವಯಸ್ಸಾದ ಕೆಲ ರೈತರ ಬಯೋಮೆಟ್ರಿಕ್ ಬರದೆ ಸಮಸ್ಯೆಯಾಗಿದೆ ಎಂದು ರೈತ ಗಂಗಾಧರ್ ತಿಳಿಸಿದರು.ಮಹಿಳೆಯರು, ವಯಸ್ಸಾದವರು ಬಿಸಿಲಿನಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ನೆರಳಿಲ್ಲ, ಕುಡಿಯುವ ನೀರು ಸಹ ಇಲ್ಲದಾಗಿದೆ. ನೋಂದಣಿ ಮಾಡಿಸಲು ನೂಕು ನುಗ್ಗಲು ಆಗುತ್ತಿದೆ. ನೋಂದಣಿ ಕೇಂದ್ರದಿಂದ ನಂದಿನಿ ಭವನದ ತನಕ ನೂರಾರು ರೈತರು ಸರತಿಯಲ್ಲಿ ಊಟ, ನೀರು ಲೆಕ್ಕಿಸದೆ ನಿಲ್ಲುತ್ತಿದ್ದಾರೆ. ಬೇಗನೇ ನೋಂದಣಿ ಮಾಡಿಸಲು ಹೆಚ್ಚುವರಿ ಕಂಪ್ಯೂಟರ್ ಸಿಬ್ಬಂದಿ ನೇಮಿಸಬೇಕು ಮತ್ತು ರೈತರಿಗೆ ಮೂಲಭೂತ ಸೌಕರ್ಯ ನೀಡಬೇಕು ಹಾಗೂ ಪೋಲಿಸ್ ಸಿಬ್ಬಂದಿಯನ್ನು ನೇಮಿಸಬೇಕು ಎಂದು ತೆಂಗು ಬೆಳೆಗಾರರ ತಾಲೂಕು ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಎಂ.ಕಾಂತರಾಜು ಆಗ್ರಹಿಸಿದ್ದಾರೆ.
ಇದೇ ವೇಳೆ ತಹಸೀಲ್ದಾರ್ ಎನ್.ಎ.ಕುಂಞ ಅಹಮದ್, ಆಹಾರ ಇಲಾಖೆಯ ಅಧಿಕಾರಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ತಾಲ್ಲೂಕಿನ ೨೨೧೬ ರೈತರಿಂದ ೩೪೮೮೬ ಕ್ವಿಂಟಾಲ್ ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಕೊಳ್ಳಲಾಗಿದೆ. ಸರ್ಕಾರ ನಿಗದಿಪಡಿಸಿರುವ ೪.೩೦ ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮುಗಿಯುತ್ತಿದ್ದಂತೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಜನವರಿ ೧೫ ರ ನಂತರ ನೊಂದಾಯಿತ ರೈತರಿಂದ ಮಾರ್ಚ್ ೩೧ ರವರೆಗೆ ರಾಗಿ ಖರೀದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ವಿ.ಬಿ.ಶ್ರೀಧರ್ ತಿಳಿಸಿದ್ದಾರೆ.