ಭತ್ತದ ನಾಟಿಗಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು, ಗ್ರಾಮಸ್ಥರ ಪ್ರತಿಭಟನೆ

| Published : Aug 06 2024, 12:30 AM IST / Updated: Aug 06 2024, 12:31 AM IST

ಭತ್ತದ ನಾಟಿಗಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು, ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಣೆಕಟ್ಟೆ ತುಂಬಿದ್ದರಿಂದ ರೈತರು ಕೃಷಿ ಮಾಡಬಹುದು ಎಂದು ಸಂತಸದಲ್ಲಿದ್ದರು. ಆದರೆ, ನಿಗಮದ ಅಧಿಕಾರಿಗಳು ಕೃಷಿಗೆ ನೀರು ಕೊಡುವುದನ್ನು ಬಿಟ್ಟು ಕೆರೆಕಟ್ಟೆಗಳಿಗೆ ನೀರು ತುಂಬಿಸುತ್ತಿರುವುದು ಸರಿಯಲ್ಲ. ಗದ್ದೆ ಬಯಲಿನ ಹೆಚ್ಚುವರಿ ನೀರಿನಿಂದ ಕೆರೆ ಕಟ್ಟೆಗಳು ತುಂಬುತ್ತವೆ ಎಂಬ ಕನಿಷ್ಠ ಜ್ಞಾನವು ಅಧಿಕಾರಿಗಳಿಗೆ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಭತ್ತದ ನಾಟಿಗಾಗಿ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ, ಕಟ್ಟು ನೀರು ಪದ್ಧತಿ ವಿರೋಧಿಸಿ ನೂರಾರು ರೈತರು, ಗ್ರಾಮಸ್ಥರು ತಾಲೂಕಿನ ಕಾಗೇಪುರದ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಗ್ಗೆ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, ಕೆಆರ್‌ಎಸ್ ಅಣೆಕಟ್ಟೆ ತುಂಬಿ ಸಾವಿರಾರು ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಆದರೆ, ನಿಗಮದ ಅಧಿಕಾರಿಗಳು ಕೃಷಿಗೆ ಕಟ್ಟುಪದ್ಧತಿಯಲ್ಲಿ ನೀರು ಬಿಡುತ್ತೇವೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿದರು.

ರೈತ ಮುಖಂಡ ಭರತ್‌ರಾಜ್ ಮಾತನಾಡಿ, ಭತ್ತದ ನಾಟಿ ಮಾಡಲು ಸಮಯ ಮುಗಿಯುತ್ತಿದೆ. ತಡವಾಗಿ ನಾಟಿ ಮಾಡಿದರೇ ಭತ್ತಕ್ಕೆ ಹಲವು ರೋಗಗಳು ಬರುವ ಜೊತಗೆ ಇಳುವರಿಯೂ ಕುಂಠಿತವಾಗುತ್ತದೆ. ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಎಂ.ವಿ ಕೃಷ್ಣ ಮಾತನಾಡಿ, ಅಣೆಕಟ್ಟೆ ತುಂಬಿದ್ದರಿಂದ ರೈತರು ಕೃಷಿ ಮಾಡಬಹುದು ಎಂದು ಸಂತಸದಲ್ಲಿದ್ದರು. ಆದರೆ, ನಿಗಮದ ಅಧಿಕಾರಿಗಳು ಕೃಷಿಗೆ ನೀರು ಕೊಡುವುದನ್ನು ಬಿಟ್ಟು ಕೆರೆಕಟ್ಟೆಗಳಿಗೆ ನೀರು ತುಂಬಿಸುತ್ತಿರುವುದು ಸರಿಯಲ್ಲ. ಗದ್ದೆ ಬಯಲಿನ ಹೆಚ್ಚುವರಿ ನೀರಿನಿಂದ ಕೆರೆ ಕಟ್ಟೆಗಳು ತುಂಬುತ್ತವೆ ಎಂಬ ಕನಿಷ್ಠ ಜ್ಞಾನವು ಅಧಿಕಾರಿಗಳಿಗೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ನಾಗೇಂದ್ರ ಮಾತನಾಡಿ, ಮಳೆ ಇಲ್ಲದೇ ಹಲವು ಬೆಳೆ ಸೇರಿದಂತೆ ಸಾವಿರಾರು ತೆಂಗಿನ ಸಸಿಗಳು ಒಣಗಿವೆ. ಕೆಆರ್‌ಎಸ್‌ನಿಂದ ಕಾಲುವೆಗಳಿಗೆ ನೀರು ಬಿಟ್ಟು ತಿಂಗಳು ಕಳೆಯುತ್ತಿದ್ದರೂ ಕೂಡ ಕೊನೆ ಭಾಗಕ್ಕೆ ನೀರು ತಲುಪ್ಪಿಲ್ಲ. ಕೂಡಲೇ ವ್ಯವಸಾಯಕ್ಕೆ ಅನುಕೂಲವಾಗುವಂತೆ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.

ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತೇಶ್ ಮಾತನಾಡಿ, ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ಮೊದಲು ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಮುಂದಾಗಿದ್ದೇವು. ಆದರೆ, ಹಲವು ಕೆರೆಗಳಲ್ಲಿ ಹೂಳು ತೆಗೆದಿರುವುದರಿಂದ ನೀರು ತುಂಬಿಸಲು ಹಲವು ದಿನಗಳು ಬೇಕಾಗುತ್ತದೆ ಎನ್ನುವುದನ್ನು ಅರಿತು ಕೃಷಿಗೆ ನೀರು ಬಿಡಲಾಗುತ್ತಿದೆ ಎಂದರು.

ಹೆಚ್ಚಿನ ನೀರನ್ನು ಪಡೆದು ಯಾವ ರೈತರಿಗೂ ತೊಂದರೆಯಾಗದಂತೆ ನೀರನ್ನು ಹರಿಸಲಾಗುವುದು. ಜೊತೆಗೆ ಕಟ್ಟು ನೀರಿನ ಪದ್ಧತಿ ಕೈಬಿಟ್ಟು ನಿರಂತರವಾಗಿ ನೀರು ಹರಿಸಲಾಗುವುದೆಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ರೈತರು, ವಿವಿಧ ಗ್ರಾಮಸ್ಥರಾದ ಸತೀಶ್, ವಿಜೇಂದ್ರ, ನಾಗೇಂದ್ರ, ಆನಂದ್, ಚನ್ನಿಗರಾಮ್, ಸುಬ್ಬೇಗೌಡ, ಮರಿಲಿಂಗಯ್ಯ, ಬೋರೇಗೌಡ, ಪ್ರಶಾಂತ್, ಪ್ರಸನ್ನ ಸೇರಿದಂತೆ ಇತರರು ಇದ್ದರು.