ಸಾಮೂಹಿಕ ನಾಯಕತ್ವ ರೈತಸಂಘದ ಕಾರ್ಯಕರ್ತರು ಬಂಡೀಪುರ ಫಾರಂ ಹೌಸ್‌ನಲ್ಲಿ ಹಿಡಿದು ಕೊಟ್ಟ ಜಿಂಕೆ ಕೊಂಬು, ಚರ್ಮ ಸಿಕ್ಕಿ ಪ್ರಕರಣದಲ್ಲಿ ಬಂಡೀಪುರ ಡಿಸಿಎಫ್ ರೈತರ ಮೇಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮೇಲುಕಾಮನಹಳ್ಳಿ ಬಳಿಯ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸಾಮೂಹಿಕ ನಾಯಕತ್ವ ರೈತಸಂಘದ ಕಾರ್ಯಕರ್ತರು ಬಂಡೀಪುರ ಫಾರಂ ಹೌಸ್‌ನಲ್ಲಿ ಹಿಡಿದು ಕೊಟ್ಟ ಜಿಂಕೆ ಕೊಂಬು, ಚರ್ಮ ಸಿಕ್ಕಿ ಪ್ರಕರಣದಲ್ಲಿ ಬಂಡೀಪುರ ಡಿಸಿಎಫ್ ರೈತರ ಮೇಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮೇಲುಕಾಮನಹಳ್ಳಿ ಬಳಿಯ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸಾಮೂಹಿಕ ನಾಯಕತ್ವ ರೈತಸಂಘದ ನಾಯಕ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಧರಣಿ ನಡೆಸಿ ಮುಖ್ಯಮಂತ್ರಿ, ಅರಣ್ಯ ಸಚಿವ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತಸಂಘದ ಕಾರ್ಯಕರ್ತರೇ ಮಾಹಿತಿ ನೀಡಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೋಗಿ ಹೋಂ ಸ್ಟೇಗಳ ಮೇಲೆ ದಾಳಿ ನಡೆಸಿದ ವನ್ಯಜೀವಿ ಕೊಂಬು ಹಾಗೂ ಚರ್ಮ,ಗನ್ ಹಾಗೂ ಇನ್ನಿತರ ವಸ್ತುಗಳು ಪತ್ತೆ ಹಚ್ಚಲು ಸಹಕರಿಸಿದವರ ಮೇಲೆ ಬಂಡೀಪುರ ಪ್ರಭಾರ ಡಿಸಿಎಫ್ ಶುಭಂ ಸಿಂಗ್ ತನ್ವರ್ ಬೆದರಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ಬಂಡೀಪುರ ಪ್ರಭಾರ ಡಿಸಿಎಫ್ ಮೇಲೆ ರೈತರ ಮೇಲೆ ಧಮಕಿ ಹಾಕಿದ್ದಾರೆ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ವಕೀಲ ರವಿಕುಮಾರ್ ಮಾತನಾಡಿ, ಹೋಂ ಸ್ಟೇನಲ್ಲಿ ಗನ್,ವನ್ಯಜೀವಿ ಚರ್ಮ,ಜಿಂಕೆ ಕೊಂಬು ಸೇರಿದಂತೆ ಇತರೆ ವಸ್ತುಗಳು ಸಿಕ್ಕಿವೆ ಆದರೆ ಹೋಂ ಸ್ಟೇ ಮಾಲೀಕರ ಮೇಲೆ ನೋಟೀಸ್‌ನ್ನು ಅರಣ್ಯ ಇಲಾಖೆ ನೀಡಿದೆ ಎಂದು ಅರಣ್ಯ ಇಲಾಖೆ ಅಸಹಾಯಕತೆಯನ್ನು ಖಂಡಿಸಿದರು.ರೈತಸಂಘದ ನಾಯಕ ಹೊನ್ನೂರು ಪ್ರಕಾಶ್ ಮಾತನಾಡಿ ಗೌರಿ,ಗಣೇಶ್ ಹಬ್ಬದ ಬಳಿಕ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಇಲಾಖೆ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಂದಿನ ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು,ಶಾಸಕರು ಆಗಮಿಸಬೇಕು.ಅಂದಿನ ಪ್ರತಿಭಟನೆಗೆ ರೈತರು ಪೊರಕೆ,ಬಾರ್ ಕೋಲ್ ತರಬೇಕು ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ಬಂಡೀಪುರ ಅರಣ್ಯ ಇಲಾಖೆ ವಿರುದ್ದ ಪ್ರತಿ ತಿಂಗಳು ಪ್ರತಿಭಟನೆ ಮಾಡಲಿದ್ದೇವೆ.ಅರಣ್ಯ ಇಲಾಖೆಗೆ ಬಂದ ಅನುದಾನ ಎಷ್ಟು.ಖರ್ಚು ಎಷ್ಟು ಎಂದು ಲೆಕ್ಕ ಕೊಡಬೇಕು.ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಸಿಎಫ್ ಕೆ.ಸುರೇಶ್,ಆರ್‌ಎಫ್ ಸಿ ಸತೀಶ್ ಪ್ರತಿಭಟನಾಕಾರರ ಮನವಿ ಆಲಿಸಿದರು.
ಸಫಾರಿ ವೆಹಿಕಲ್ ಗೆ ಜಿಪಿಎಸ್ ಹಾಕಿಲ್ಲ, ವೆಹಿಕಲ್ ಎಫ್‌ಸಿ,ಇಲ್ಲ,ವಿಮೆವಿಲ್ಲ ಏಕೆ?:ಬಂಡೀಪುರ ಪ್ರಭಾರ ಡಿಸಿಎಫ್ ವಿರುದ್ದ ಸಾಮೂಹಿಕ ನಾಯಕತ್ವ ರೈತಸಂಘದ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜು ಕಿರಣ್ ಮಾತನಾಡಿ ಸಫಾರಿ ವಾಹನಗಳಿಗೆ ಜಿಪಿಎಸ್ ಹಾಕಿಲ್ಲವೇಕೆ ಎಂದು ಪ್ರಶ್ನಿಸಿದರು.
ಸಫಾರಿ ಆರಂಭಕ್ಕೆ ಅರಣ್ಯ ಇಲಾಖೆ ತೋರಿದ ಉತ್ಸಾಹ ನೋಡಿದರೆ ಆನೆ,ಹುಲಿ ಕಾಡಿನಲ್ಲಿ ಜನ ನೋಡದೆ ಆತ್ಮಹತ್ಮೆ ಮಾಡಿಕೊಂಡಿವೆ ಎಂಬಂತೆ ನಡೆದುಕೊಂಡು ಸಫಾರಿ ಆರಂಭಿಸಿದರು ಎಂದು ವ್ಯಂಗ್ಯವಾಡಿದರು.ಸಫಾರಿ ಆರಂಭವಾದರೂ ಸಫಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಿಲ್ಲ? ಕೆಲ ವಾಹನಗಳಿಗೆ ಎಫ್‌ಸಿ ಇಲ್ಲ,ಕೆಲ ವಾಹನಗಳಿಗೆ ವಿಮೆ ಕಟ್ಟಿಲ್ಲ ಎಂದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ನಡೆಯೇ ಅನುಮಾನ ಮೂಡುತ್ತದೆ ಎಂದರು.
ಆರ್‌ಎಫ್‌ಒ ಸತೀಶ್ ಪ್ರತಿಭಟನಾಕಾರರ ಆರೋಪಕ್ಕೆ ಸಮಜಾಯಿಸಿ ನೀಡಿದಂತೆ ಮಾತನಾಡಿ ಮೊಬೈಲ್ ಜಿಪಿಎಸ್ ನಲ್ಲಿ ಸದ್ಯಕ್ಕೆ ಸಫಾರಿ ವಾಹನಗಳನ್ನು ಓಡಿಸಲಾಗುತ್ತಿದೆ.ಆ.31 ರೊಳಗೆ ಜಿಪಿಎಸ್ ಅಳವಡಿಸಲಾಗುವುದು ಎಂದು ಹೇಳಿದರು.ಪಾಲಾಕ್ಷ, ಶಶಿ, ಷಣ್ಮುಖಸ್ವಾಮಿ, ಮಹಿಳೆಯರು ಸೇರಿದಂತೆ ನೂರಾರು ಮಂದಿ ಇದ್ದರು.