ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

| Published : Mar 09 2025, 01:46 AM IST

ಸಾರಾಂಶ

ಅರಣ್ಯ ಇಲಾಖೆಯವರು ರೈತರಿಗೆ ನೋಟಿಸ್ ನೀಡುವ ಮುನ್ನ ರೈತರೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿ, ನಮ್ಮ ಬಳಿಯಿರುವ ಪಹಣಿ, ಹಕ್ಕುಪತ್ರಗಳು, ನೋಂದಣಿ ಪತ್ರಗಳನ್ನು ಪರಿಶೀಲಿಸಿ ಅನಂತರ ಅವುಗಳನ್ನು ನ್ಯಾಯಾಲಯ ಮೂಲಕ ವಶಕ್ಕೆ ಪಡೆಯಬೇಕಾಗಿತ್ತು, ಆದರೆ ಅಧಿಕಾರಿಗಳು ರೈತರ ಜಮೀನಿಗೆ ಜೆಸಿಬಿಗಳನ್ನು ಬಿಟ್ಟು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ?

ಚಿಂತಾಮಣಿ: ಕಳೆದ ೪೦- ೫೦ ವರ್ಷಗಳಿಂದ ಜಮೀನಿನನ್ನೇ ನಂಬಿ ಜೀವನ ನಡೆಸುತ್ತಿರುವ ನಮ್ಮ ಮೇಲೆ ಏಕಾಏಕಿ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲವೆಂದು ರೈತ ಮುಖಂಡ ರಘುನಾಥರೆಡ್ಡಿ ನುಡಿದರು. ನಗರದ ಪ್ರವಾಸಿ ಮಂದಿರದಿಂದ ಕೋಲಾರ ವೃತ್ತದ ಬಳಿಯ ಅರಣ್ಯ ಇಲಾಖೆವರೆಗೂ 150ಕ್ಕೂ ಹೆಚ್ಚು ರೈತರು ಬಿರುಬಿಸಿಲಿನಲ್ಲೇ ನಡೆದುಕೊಂಡು ಹೋಗಿ ಇಲಾಖೆಯ ನಡೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯವರು ರೈತರಿಗೆ ನೋಟಿಸ್ ನೀಡುವ ಮುನ್ನ ರೈತರೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿ, ನಮ್ಮ ಬಳಿಯಿರುವ ಪಹಣಿ, ಹಕ್ಕುಪತ್ರಗಳು, ನೋಂದಣಿ ಪತ್ರಗಳನ್ನು ಪರಿಶೀಲಿಸಿ ಅನಂತರ ಅವುಗಳನ್ನು ನ್ಯಾಯಾಲಯ ಮೂಲಕ ವಶಕ್ಕೆ ಪಡೆಯಬೇಕಾಗಿತ್ತು, ಆದರೆ ಅಧಿಕಾರಿಗಳು ರೈತರ ಜಮೀನಿಗೆ ಜೆಸಿಬಿಗಳನ್ನು ಬಿಟ್ಟು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಯಾವ ಪುರುಷಾರ್ಥಕ್ಕೆ ರೈತರಿಗೆ ನೋಟಿಸ್ ನೀಡಿದ್ದಿರೆಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆರೆಗಳು, ದೇವಾಲಯದ ಜಮೀನು, ರೈತರ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ನೆಪದಲ್ಲಿ ಕಬಳಿಸಲು ಮುಂದಾಗಿರುವುದು ಸರಿಯಲ್ಲ, ಇಂತಹ ನೋಟಿಸ್‌ಗಳಿಗೆ ರೈತರು ಜಗ್ಗುವುದಿಲ್ಲ, ಪ್ರಾಣವನ್ನಾದರೂ ಬಿಟ್ಟೇವು, ಆದರೆ ನಮ್ಮ ಜಮೀನನ್ನು ಅರಣ್ಯ ಇಲಾಖೆಗೆ ಬಿಟ್ಟಿಕೊಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಕದಿರೇಗೌಡ, ವೆಂಕಟರಾಮರೆಡ್ಡಿ, ವೆಂಕಟರಮಣಪ್ಪ ಸೇರಿ ೧೫೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.