ರೈತರು ಹುಳಿಯಾರು ಅರಸೀಕೆರೆ ರಸ್ತೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಯಿತು. ರೈತರ ಆರೋಪದ ಪ್ರಕಾರ, ರಾಗಿ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಟ್ರ್ಯಾಕ್ಟರ್‌ಗಳನ್ನು ವಾರಗಳ ಕಾಲ ಸಾಲಿನಲ್ಲಿ ನಿಲ್ಲಿಸಬೇಕಾಗುತ್ತಿದೆ. ಇದರಿಂದ ಟ್ರ್ಯಾಕ್ಟರ್‌ ಬಾಡಿಗೆ, ಚಾಲಕರ ವೆಚ್ಚ ಸೇರಿದಂತೆ ರೈತರಿಗೆ ಹೆಚ್ಚುವರಿ ಭಾರವಾಗುತ್ತಿದೆ. ರಾಗಿ ಮಾರಾಟಕ್ಕೂ ಮೊದಲೇ ಅರ್ಧ ಹಣ ಖರ್ಚಾಗುತ್ತಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ರೈತರ ಪರ ಮಾಡಾಳು ದಾಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಜೆ.ಸಿ. ಪುರ ಗ್ರಾಮದ ಎಪಿಎಂಸಿ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರದಲ್ಲಿ ಉಂಟಾದ ಅವ್ಯವಸ್ಥೆ ವಿರುದ್ಧ ರೈತರು ಆಕ್ರೋಶಗೊಂಡು ರಸ್ತೆ ತಡೆ ನಡೆಸಿದ ಘಟನೆ ನಡೆಯಿತು.

ಮಾಡಾಳು ಸೋಮಣ್ಣ ಅವರ ನೇತೃತ್ವದಲ್ಲಿ ರೈತರು ಹುಳಿಯಾರು ಅರಸೀಕೆರೆ ರಸ್ತೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಯಿತು. ರೈತರ ಆರೋಪದ ಪ್ರಕಾರ, ರಾಗಿ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಟ್ರ್ಯಾಕ್ಟರ್‌ಗಳನ್ನು ವಾರಗಳ ಕಾಲ ಸಾಲಿನಲ್ಲಿ ನಿಲ್ಲಿಸಬೇಕಾಗುತ್ತಿದೆ. ಇದರಿಂದ ಟ್ರ್ಯಾಕ್ಟರ್‌ ಬಾಡಿಗೆ, ಚಾಲಕರ ವೆಚ್ಚ ಸೇರಿದಂತೆ ರೈತರಿಗೆ ಹೆಚ್ಚುವರಿ ಭಾರವಾಗುತ್ತಿದೆ. ರಾಗಿ ಮಾರಾಟಕ್ಕೂ ಮೊದಲೇ ಅರ್ಧ ಹಣ ಖರ್ಚಾಗುತ್ತಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ರೈತರ ಪರ ಮಾಡಾಳು ದಾಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರೈತ ದಿಬ್ಬೂರು ಚೌಡಪ್ಪ ಮಾತನಾಡಿ, ಈ ಕೇಂದ್ರದಲ್ಲಿ ಸುಮಾರು 4 ಸಾವಿರ ಕಾರ್ಡ್‌ಗಳು ನೋಂದಾಯಿತವಾಗಿವೆ. ಆದರೆ ಇಷ್ಟು ದಿನವಾದರೂ ಸಾವಿರ ಕಾರ್ಡ್‌ಗಳ ರಾಗಿ ಖರೀದಿಯೂ ಪೂರ್ಣಗೊಂಡಿಲ್ಲ. ದಿನಕ್ಕೆ ಒಂದೇ ಲಾರಿ ಕಳುಹಿಸಲಾಗುತ್ತಿದೆ. ಕನಿಷ್ಠ ಐದು ಲಾರಿಗಳ ಅವಶ್ಯಕತೆ ಇದೆ ಎಂದು ಆರೋಪಿಸಿದರು. ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ, ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಸಂಚಾರವನ್ನು ಪುನರಾರಂಭಗೊಳಿಸಿದರು. ಬಳಿಕ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದರು. ಇದರಿಂದ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.