ಕನ್ನಡಪ್ರಭ ವಾರ್ತೆ ತಿಪಟೂರು
ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ರಾಜ್ಯ ರೈತಸಂಘದ ಮುಖಂಡ ಟಿ.ಬಿ.ಜಯಾನಂದಯ್ಯ ಆಗ್ರಹಿಸಿದರು.ನಗರದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಕರ್ನಾಟಕ ಪ್ರಾಂತ ರೈತಸಂಘ, ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ವತಿಯಿಂದ ನಡೆದ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಲಿ ಎಂಬ ಕಾರಣದಿಂದ ಎಂದು ಕನಿಷ್ಟ ಬೆಂಬಲ ಬೆಲೆ ಅಡಿ ರೈತರು ಬೆಳೆದ ವಸ್ತುಗಳನ್ನು ಖರೀದಿಸುವ ಯೋಜನೆ ಪ್ರಾರಂಭಿಸಲಾಯಿತು. ೨೧ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೊಷಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯೂ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು. ಇದರಿಂದ ರೈತರಿಗೆ ಅನ್ಯಾಯ ಮತ್ತು ಮೋಸವಾಗುತ್ತಿದೆ ಎಂದರು.ರೈತ ಬಳುವನೇರಲು ಸಿದ್ದಪ್ಪ ಮಾತನಾಡಿ ಎಪಿಎಂಸಿಯಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಒಂದು ಲೋಡಿಗೆ ಸುಮಾರು ಎರಡು ಕ್ವಿಂಟಲ್ ರಾಗಿ ಕಳ್ಳತನವಾಗುತ್ತಿದೆ. ಕಳ್ಳತನವನ್ನು ತಡೆಯಲು ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದ ಕಾರಣ ರಾಗಿ ಖರೀದಿ ಅಧಿಕಾರಿಗಳು ಅವರ ಕೈಯಿಂದ ದಂಡ ತೆರುವ ಪರಿಸ್ಥಿತಿ ಉದ್ಭವವಾಗಿದೆ. ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರೂ ಇನ್ನೂ ಯಾರ ಮೇಲೆಯೂ ಕ್ರಮವಾಗಿಲ್ಲ. ಈಗ ಖರೀದಿ ಪ್ರಕ್ರಿಯೆ ಮುಗಿದಿರುವುದರಿಂದ ಮುಂದಿನ ಸಲವಾದರೂ ಅಕ್ರಮ ನಡೆಯದಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಭೂಮಿಯನ್ನು ಬಗರ್ ಹುಕುಂ ರೈತರಿಗೆ ಮಂಜೂರು ಮಾಡಿ ಹಕ್ಕು ಪತ್ರ ನೀಡಿ ಬಡವರ ಪರ ನಿಲ್ಲಬೇಕಾಗಿದ್ದ ಸರ್ಕಾರ ಈಗ ಈ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಸರ್ಕಾರ ಎಲ್ಲಾ ರೈತರಿಗೆ ಭೂಮಿ ನೀಡದಿದ್ದರೆ ರೈತ ಸಂಘಟನೆಗಳು ಉಗ್ರ ಹೋರಾಟ ಕೈಗೊಳ್ಳಲಿವೆ ಎಂದರು. ರೈತ ಮುಖಂಡ ಯೋಗೀಶಣ್ಣ ಮಾತನಾಡಿ ರಾಗಿ ಫಸಲು ಬಂದ ಕೂಡಲೇ ತಡಮಾಡದೇ ರಾಗಿ ಖರೀದಿ ಪ್ರಾರಂಭಿಸಬೇಕು. ರೈತರು ಟ್ರಾಕ್ಟರ್‌ಗಳಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ತಂದಾಗ ೨-೩ದಿನ ಕಾಯಿಸದೇ ೮ ಗಂಟೆಗಳಲ್ಲಿ ರಾಗಿ ಕೊಳ್ಳಬೇಕು. ರೈತರ ಹಣವನ್ನು ನಿಯಮದಂತೆ ೩ ದಿನಗಳೊಳಗಾಗಿ ರೈತರ ಖಾತೆಗಳಿಗೆ ಹಾಕಬೇಕು ಎಂದು ಆಗ್ರಹಿಸಿದರು.ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಗಡಬನಹಳ್ಳಿ ತಿಮ್ಮೇಗೌಡ, ಬೇಲೂರನಹಳ್ಳಿ ಷಡಾಕ್ಷರಯ್ಯ, ಮಲ್ಲಿಕಾರ್ಜುನಯ್ಯ, ಇತರರು ಉಪಸ್ಥಿತರಿದ್ದರು.ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯ
ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ರಾಜ್ಯ ರೈತಸಂಘದ ಮುಖಂಡ ಟಿ.ಬಿ.ಜಯಾನಂದಯ್ಯ ಆಗ್ರಹಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.