ನೀರಿಗಾಗಿ ಮೈಲಾರ ಜಾತ್ರೆ ಜಪಿಸುತ್ತಿರುವ ರೈತರು!

| Published : Feb 08 2024, 01:36 AM IST

ಸಾರಾಂಶ

ಇತ್ತೀಚೆಗೆ ನದಿಯ ನೀರಿನ ತೀವ್ರ ಇಳಿಕೆ ಕಂಡಿದೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ನಿತ್ಯ ಹರಸಾಹಸ ಪಡುತ್ತಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಈ ಭಾಗದ ನದಿ ತೀರದ ರೈತರು ಮೈಲಾರಲಿಂಗೇಶ್ವರ ಜಾತ್ರೆಯನ್ನೇ ಜಪಿಸುತ್ತಾರೆ. ಯಾವಾಗ ನದಿಗೆ ನೀರು ಬಿಡುತ್ತಾರೋ ಎಂಬ ಚಿಂತೆ ರೈತನ್ನು ಕಾಡುತ್ತಿದೆ.

ಹೌದು, ಈ ಬಾರಿ ಮಳೆ ಕೊರತೆಯಿಂದ ತುಂಗಭದ್ರಾ ನದಿ ಸಂಪೂರ್ಣ ಖಾಲಿಯಾಗಿದೆ. ಕೆಲವು ಕಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇತ್ತ ನದಿ ತೀರದ ರೈತರು ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ಬಿಡುಗಡೆಯಾಗುವ ನೀರನ್ನು ನಂಬಿಕೊಂಡು ಭತ್ತದ ನಾಟಿ ಮಾಡಿದ್ದಾರೆ.

ಮಳೆ ಇಲ್ಲದೇ ನದಿಯಲ್ಲಿ ನೀರು ಕಡಿಮೆ ಇದೆ. ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಆದ್ದರಿಂದ ರೈತರು 2ನೇ ಬೆಳೆಯನ್ನು ತುಂಗಭದ್ರಾ ನದಿ ನೀರನ್ನು ಬಳಸಿಕೊಂಡು ಬೆಳೆಯಬಾರದೆಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಈ ಬಾರಿ ಭತ್ತಕ್ಕೆ ಬಂಪರ್‌ ಬೆಲೆ ಸಿಕ್ಕಿರುವ ಹಿನ್ನೆಲೆ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ನದಿ ತೀರದ ಎಲ್ಲ ಗ್ರಾಮಗಳ ರೈತರು ಭತ್ತ ನಾಟಿ ಮಾಡಿದ್ದಾರೆ. ನಾಟಿ ಮಾಡಿ ತಿಂಗಳು ಕಳೆಯುತ್ತಾ ಬಂದಿದೆ. ಆದರೆ ನದಿಯಲ್ಲಿ ನೀರು ದಿನದಿಂದ ದಿನಕ್ಕೆ 5- 6 ಅಡಿಯಷ್ಟು ಖಾಲಿಯಾಗುತ್ತಿದೆ. ಅಲ್ಲದೇ ಪಂಪ್‌ಸೆಟ್‌ ಮೂಲಕ ಪೈಪ್‌ಲೈನ್‌ ಹಾಕಿಕೊಂಡು ತಮ್ಮ ಜಮೀನುಗಳಿಗೆ ನೀರನ್ನು ಹಾಯಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ನದಿಯ ನೀರಿನ ತೀವ್ರ ಇಳಿಕೆ ಕಂಡಿದೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ನಿತ್ಯ ಹರಸಾಹಸ ಪಡುತ್ತಿದ್ದಾರೆ.

ಈ ಭಾಗದ ರೈತರಿಗೆ ವರದಾನವಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ ನೀರು ನಂಬಿಕೊಂಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಬ್ಯಾರೇಜ್‌ನಲ್ಲಿ 503.10 ಟಿಎಂಸಿ ನೀರು ಸಂಗ್ರಹವಾಗಬೇಕಿತ್ತು. ಆದರೆ ಕೆಲವು ಗ್ರಾಮಗಳ ಸ್ಥಳಾಂತರ ಅಡ್ಡಿಯಾಗಿರುವ ಕಾರಣ ನೀರು ಸಂಗ್ರಹವಾಗದೇ ಮಳೆಗಾಲದಲ್ಲಿ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ. ಇದರಿಂದ ಈ ಭಾಗದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ನಲ್ಲಿ ಕೇವಲ 0.650 ಟಿಎಂಸಿ ಮಾತ್ರ ನೀರು ಇದೆ.

ಪ್ರತಿವರ್ಷ ಮೈಲಾರ ಜಾತ್ರೆ ಸಂದರ್ಭದಲ್ಲಿ ಭದ್ರಾ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡುತ್ತಾರೆ. ಫೆ. 26ರಂದು ಮೈಲಾರಲಿಂಗೇಶ್ವರ ಕಾರ್ಣಿಕ ಇರುವ ಹಿನ್ನೆಲೆ ಫೆ. 5ರ ರಾತ್ರಿಯಿಂದ 6 ದಿನಗಳ ಕಾಲ ತುಂಗಭದ್ರಾ ನದಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಈವರೆಗೂ ಭದ್ರಾ ನೀರು ಮೈಲಾರ ತಲುಪಿಲ್ಲ. ಈ ನೀರನ್ನೇ ನೆಚ್ಚಿಕೊಂಡು ರೈತರು ಭತ್ತದ ನಾಟಿ ಮಾಡಿದ್ದಾರೆ. ನಿತ್ಯ ನೀರಿನದ್ದೇ ಚಿಂತೆ ಕಾಡುತ್ತಿದೆ. ಭದ್ರಾ ಜಲಾಶಯದಿಂದ ಬಿಡುಗಡೆಯಾಗುವ ನೀರು ನದಿಗೆ ಯಾವಾಗ ಬರುತ್ತೋ ಎಂದು ಚಾತಕ ಪಕ್ಷಿಯಂತೆ ನದಿ ದಡದಲ್ಲಿ ರೈತರು ಕಾಯುತ್ತಿದ್ದಾರೆ.

ಸಮಸ್ಯೆ ಉಂಟಾಗದು: ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ 0.650 ಟಿಎಂಸಿ ನೀರು ಒಂದು ವಾರಕ್ಕೆ ಮಾತ್ರ ಆಗಲಿದೆ. ಉಳಿದಂತೆ ಈಗಾಗಲೇ ಭದ್ರಾ ಜಲಾಶಯದಿಂದ ಫೆ. 5ರಿಂದ ನೀರು ಬಿಡುಗಡೆ ಮಾಡಿದ್ದಾರೆ. 6 ದಿನಗಳ ಕಾಲ ದಿನಕ್ಕೆ 2 ಸಾವಿರ ಕ್ಯುಸೆಕ್‌ನಂತೆ ಒಟ್ಟು 1 ಟಿಎಂಸಿ ನೀರು ಬರಲಿದೆ. ಇಷ್ಟು ನೀರು ಬಂದರೆ ಈ ಭಾಗಕ್ಕೆ ಯಾವುದೇ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪ ವಿಭಾಗದ ಎಇಇ ರಾಘವೇಂದ್ರ ತಿಳಿಸಿದರು.

ರೈತರಿಗೆ ತೊಂದರೆ: ನದಿಯಲ್ಲಿ ನಿತ್ಯ ನೀರು ಕಡಿಮೆಯಾಗುತ್ತಿದೆ. ಭದ್ರಾ ಜಲಾಶಯದ ನೀರನ್ನು ನಂಬಿಕೊಂಡು ಭತ್ತ ನಾಟಿ ಮಾಡಿದ್ದೇವೆ. ಮಳೆ ಕೊರತೆಯಿಂದ ನೀರು ಕಡಿಮೆಯಾಗಿದೆ. ನೀರು ಹಿಂದಕ್ಕೆ ಹೊಂದಂತೆಲ್ಲ ರೈತರು ಸಾಲ ಮಾಡಿ ನಿತ್ಯ ಪೈಪ್‌ ಹಾಗೂ ವೈರ್‌ ಖರೀದಿ ಮಾಡುತ್ತಿದ್ದಾರೆ. ರೈತರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ನದಿ ತೀರದ ರೈತರು.