ಸಾರಾಂಶ
ತಾಲೂಕಿನ ಕೆಲವೆಡೆ ಭಾನುವಾರ ರಾತ್ರಿ ಪೂರ್ವ ಮುಂಗಾರು ಮಳೆ ಗುಡುಗು-ಮಿಂಚಿನ ಅಬ್ಬರದಿಂದ ಆರಂಭವಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕೆಲವೆಡೆ ಭಾನುವಾರ ರಾತ್ರಿ ಪೂರ್ವ ಮುಂಗಾರು ಮಳೆ ಗುಡುಗು-ಮಿಂಚಿನ ಅಬ್ಬರದಿಂದ ಆರಂಭವಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ತಾಲೂಕಿನಲ್ಲಿ ಬಿರು ಬೇಸಿಗೆಯ ಬಿಸಿಲಿನ ಹೊಡೆತಕ್ಕೆ ತೆಂಗು, ಅಡಿಕೆ, ಬಾಳೆ ಮತ್ತಿತರೆ ತೋಟಗಾರಿಕೆ ಬೆಳೆಗಳು ನೀರಿಲ್ಲದೆ ನಲುಗಿ ಹೋಗಿದ್ದವು. ಅತೀ ಹೆಚ್ಚಿನ ಬಿಸಿಲಿನ ತಾಪಕ್ಕೆ ಜನರು ತತ್ತಿಸಿದ್ದರು. ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಬಾರಿ ಕುಸಿತ ಕಂಡಿದ್ದರಿಂದ ನೀರು ನಿಂತು ಹೋಗುತ್ತಿದ್ದರಿಂದ ರೈತರು ಮುಂದೇನೂ ಎಂಬ ಚಿಂತೆಯಲ್ಲಿ ಕಾಲಕಳೆಯುತ್ತಿದ್ದರು. ಯಾವಾಗ ಮಳೆ ಬರುವುದೋ ಎಂದು ಆಕಾಶದತ್ತ ನೋಡುತ್ತಿದ್ದ ರೈತನಿಗೆ ಮಧ್ಯ ರಾತ್ರಿ ಸುರಿದ ಮಳೆ ತುಸು ನೆಮ್ಮದಿ ನೀಡಿದೆ.ಬಹುತೇಕ ರೈತರಿಗೆ ಇಷ್ಟು ಬೇಗ ಮಳೆ ಬರುವ ನಂಬಿಕೆ ಸ್ವಲ್ಪವೂ ಇರಲಿಲ್ಲ. ಸಂಜೆಯವರೆಗೂ ಮಳೆ ಬರುವ ಯಾವ ಮುನ್ಸೂಚನೆಗಳೂ ಇರಲಿಲ್ಲ. ಮದ್ಯರಾತ್ರಿ ಗುಡುಗು-ಮಿಂಚಿನಿಂದ ಆರಂಭವಾದಾಗಲೇ ಮಳೆ ಗ್ಯಾರಂಟಿ ಎನ್ನುವ ನಂಬಿಕೆ ಬಂದಿದೆ. ಸೋಮವಾರ ಬೆಳಗ್ಗೆ ೫ಗಂಟೆಯವರೆಗೂ ಸುರಿದ ಹದ ಮಳೆ ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಭೂಮಿ ಮತ್ತು ವಾತಾವರಣವನ್ನು ತಂಪು ಮಾಡಿದ್ದು, ಜನತೆ ಒಂದು ರೀತಿಯಲ್ಲಿ ನಿರಾಳರಾಗಿದ್ದಾರೆ. ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು, ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು, ಹರಳು ಮತ್ತಿತರೆ ಬೆಳೆಗಳನ್ನು ಬೆಳೆಯುವ ವಾಡಿಕೆ ಇದ್ದು, ಇಂದಿನ ಮಳೆಗೆ ಕೆಲವರು ಉಳುಮೆ ಮಾಡುವತ್ತ ತರಾತುರಿಯಲ್ಲಿದ್ದಾರೆ.