ಸಾರಾಂಶ
ದೇಶಕ್ಕೆ ಅನ್ನ ಕೊಡುವ ಅನ್ನದಾತ ನೀರು, ಮೇವುಗಾಗಿ ಬರಬಿಸಿಲಿನಿಂದ ಹಾಗೂ ಮಳೆ ಇಲ್ಲದೆ ಪರಿತಪಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ದೇಶಕ್ಕೆ ಅನ್ನ ಕೊಡುವ ಅನ್ನದಾತ ನೀರು, ಮೇವುಗಾಗಿ ಬರಬಿಸಿಲಿನಿಂದ ಹಾಗೂ ಮಳೆ ಇಲ್ಲದೆ ಪರಿತಪಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು. ಪಿಜಿ ಪಾಳ್ಯಗ್ರಾಮದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸ್ಥಿತಿಗೆ ನಮ್ಮನ್ನಾಳಿದ ಸರ್ಕಾರಗಳು ಕಾರಣ. ನೀರು, ಮೇವು ಕೊಡಲಿಕ್ಕಾಗದ ಸರ್ಕಾರಗಳು ಹಾಗೂ ಅಧಿಕಾರಿಗಳ ಮೇಲೆ ಚಳವಳಿ ಮಾಡಿದರೆ ರೈತ ಸಂಘದ ಕಾರ್ಯಕರ್ತರನ್ನು ಕೆಟ್ಟದಾಗಿ ನೋಡುತ್ತಾರೆ. ಭಾಷಣಗಳಲ್ಲಿ ಮಾತನಾಡುವಾಗ ಹಾಗೂ ಚುನಾವಣೆಗಳು ಬಂದ ಸಂದರ್ಭದಲ್ಲಿ ನಮ್ಮನ್ನು ನೋಡುವ ರೀತಿಯೇ ಬೇರೆ, ಗೆದ್ದಮೇಲೆ ನೋಡುವ ರೀತಿಯೇ ಬೇರೆ. ನಾವು ಯಾರಿಗೆ ಮತ ಹಾಕಿದರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.
ಚಳವಳಿ ಮಾಡೋ ಸಂದರ್ಭದಲ್ಲಿ ಶಾಂತಿ ಶಿಸ್ತಿನಿಂದ ಹೋರಾಟ ಮಾಡಬೇಕು. ಇದಕ್ಕೆ ಉದಾಹರಣೆ ಇಂಡಿಗನತ್ತ ಗ್ರಾಮ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಅವರನ್ನು ಕೆರಳಿಸಿ ಗಲಭೆ ಮಾಡುವ ರೀತಿ ಮಾಡಿದ್ದಾರೆ. ಹೀಗಾಗಿ ನಾವು ನ್ಯಾಯ ಕೇಳುವಾಗ ಶಾಂತ ರೀತಿಯಲ್ಲಿ ಗ್ರಾಮಸ್ಥರು ವರ್ತಿಸಬೇಕು ಎಂದರು. ಇಂದಿನ ಬರಗಾಲ ಪರಿಸ್ಥಿತಿಗೆ ನಾವು ಕಾರಣ ಎಂದು ತಿಳಿದುಕೊಳ್ಳಬೇಕು. ಕೆಲವೇ ಕೆಲವು ವರ್ಷಗಳಲ್ಲಿ ಅಂತರ್ಜಲ ಮಟ್ಟವನ್ನು ಸಾವಿರದಿಂದ ಎರಡು ಸಾವಿರದಡಿಗೆ ತೆಗೆದುಕೊಂಡು ಹೋಗಿದ್ದೇವೆ. ಈ ಪರಿಸ್ಥಿತಿ ಮುಂದುವರೆದರೆ ನಮ್ಮ ಮಕ್ಕಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಇರುವುದೊಂದು ಭೂಮಿಯನ್ನು ಉಳಿಸುವುದಕ್ಕೆ ರೈತ ಸಂಘವು ಮೊದಲ ವಿಷಯವಾಗಿ ತೆಗೆದುಕೊಳ್ಳಬೇಕು ಎಂದರು. ರೈತರು ಸಾವಯವ ಕೃಷಿಗೆ ಹೋಗಿ ಬೆಳೆದಂತ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಮಾತ್ರ ಕೃಷಿ ಉಳಿಯಲು ಸಾಧ್ಯ ಎಂದು ತಿಳಿಸಿದರು.ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ. ನಾವು ಸಂಘಟಿತವಾಗಿ ಹೋರಾಟ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ನೀವು ಸಂಘಟಿತರಾಗಿರುವ ಜೊತೆಗೆ ಬೇರೆ ಗ್ರಾಮಗಳಲ್ಲೂ ಸಂಘಟಿತರಾಗಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಖಜಾಂಚಿ ಅಂಬಳೆ ಶಿವಕುಮಾರಸ್ವಾಮಿ, ಗೌಡಳ್ಳಿ ಸೋಮಣ್ಣ, ಬಿದರಳ್ಳಿ ಪುಟ್ಟಸ್ವಾಮಿ, ಕಡಗೂರು ಜಗದೀಶ್ ಮತ್ತು ಮಾದೇಸ್ವಾಮಿ, ಜಂಗಡಿ ಚಿಕ್ಕಮಾದು, ಒಡೆಯರ್ ಪಾಳ್ಯದ ಮಂಜು ಪಿ.ಜಿ ಪಾಳ್ಯದ ಪ್ರಭುಸ್ವಾಮಿ ಪವನ್ ಪ್ರವೀಣ್ ಇನ್ನಿತರರು ಇದ್ದರು.