ಸಾರಾಂಶ
ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನಡೆಗೆ ಬೇಸತ್ತು ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳಾದ ರಾಜು ನಾಯ್ಕರ್, ಮಹ್ಮದ್ ಯಾಸೀನ್ ನದಾಫ್ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನಡೆಗೆ ಬೇಸತ್ತು ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳಾದ ರಾಜು ನಾಯ್ಕರ್, ಮಹ್ಮದ್ ಯಾಸೀನ್ ನದಾಫ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭವಿಷ್ಯದ ರಾಜಕೀಯ ದೃಷ್ಟಿಕೋನದಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಸ್ವಾಗತಾರ್ಹ. ಆದರೆ ಜಿಲ್ಲೆಯ ಮುಖಂಡರು ಈ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವುದು ಬೇಸರ ತರಿಸಿದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಪಕ್ಷವನ್ನು ಬಾದಾಮಿ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿ ಉಳಿದ ಕಡೆಗಳಲ್ಲಿ ಸಂಪೂರ್ಣ ಕಡೆಗಣಿಸಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಅವರ ನಡೆಗೆ ಬೇಸತ್ತು ರಸೀದ್ ಭಾಗವಾನ್, ಮಹ್ಮಮ ಮಿರ್ಜಿ, ತನವೀರ ಬೇವೂರ ಸೇರಿದಂತೆ ಕೆಲವರು ರಾಜೀನಾಮೆ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದರು.ರಾಜೀನಾಮೆ ನೀಡಿರುವ ಮುಖಂಡರ ಮುಂದಿನ ನಡೆ ಏನು ಎನ್ನುವುದನ್ನು ಸದ್ಯಕ್ಕೆ ಸ್ಪಷ್ಟಪಡಿಸಿಲ್ಲವಾದರೂ ತಟಸ್ಥ ನೀತಿಗೆ ಅಂಟಿಕೊಳ್ಳುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಸೀದ್ ಭಾಗವಾನ್, ಮಹ್ಮಮ ಮಿರ್ಜಿ, ತನವೀರ ಬೇವೂರ ಉಪಸ್ಥಿತರಿದ್ದರು.