ಖಾಸಗಿ ಹಣಕಾಸು ಸಂಸ್ಥೆ ವ್ಯವಸ್ಥಾಪನಿಂದ ಲಕ್ಷಾಂತರ ರು. ಹಣ ದುರುಪಯೋಗ..!

| Published : May 01 2024, 01:16 AM IST

ಖಾಸಗಿ ಹಣಕಾಸು ಸಂಸ್ಥೆ ವ್ಯವಸ್ಥಾಪನಿಂದ ಲಕ್ಷಾಂತರ ರು. ಹಣ ದುರುಪಯೋಗ..!
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಪಟ್ಟಣದ ತಾಲೂಕು ಕಚೇರಿ ಪಕ್ಕದ ಜವರೇಗೌಡ ಕಾಂಪ್ಲೆಕ್ಸ್ ನಲ್ಲಿರುವ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಗಜೇಂದ್ರ ಅಲಿಯಾಸ್ ಕುಮಾರ್ ತಾಲೂಕಿನ 28 ಗ್ರಾಹಕರ ಸಾಲದ ಹಣ ಮತ್ತು ಸಾಲ ಮರುಪಾವತಿ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಖಾಸಗಿ ಹಣಕಾಸು ಸಂಸ್ಥೆ ವ್ಯವಸ್ಥಾಪಕನಿಂದ ಗ್ರಾಹಕರ ಹೆಸರಿನಲ್ಲಿ ಮಂಜೂರಾಗಿದ್ದ ಸಾಲ ಹಾಗೂ ಮರುಪಾವತಿ ಮಾಡಲಾಗಿದ್ದ ಲಕ್ಷಾಂತರ ರು. ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪಟ್ಟಣದ ತಾಲೂಕು ಕಚೇರಿ ಪಕ್ಕದ ಜವರೇಗೌಡ ಕಾಂಪ್ಲೆಕ್ಸ್ ನಲ್ಲಿರುವ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಗಜೇಂದ್ರ ಅಲಿಯಾಸ್ ಕುಮಾರ್ ತಾಲೂಕಿನ 28 ಗ್ರಾಹಕರ ಸಾಲದ ಹಣ ಮತ್ತು ಸಾಲ ಮರುಪಾವತಿ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಹಗರಣ ಸಂಬಂಧ ಸೂರ್ಯ ಫೈನಾನ್ಸ್ ಕಂಪನಿ ಈಗಿನ ಶಾಖಾ ವ್ಯವಸ್ಥಾಪಕ ಪಿ.ಎಂ.ಪವನ್ ಕುಮಾರ್ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿ ಗಜೇಂದ್ರ ಅಲಿಯಾಸ್ ಕುಮಾರ್ ವಿರುದ್ಧ ಐಪಿಸಿ 420ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ನಂತರ ತಲೆಮರಸಿಕೊಂಡಿರುವ ಗಜೇಂದ್ರನ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಬನ್ನಿ ಸಾರಿಗೆ ಗ್ರಾಮದ ನಿವಾಸಿ ಗಜೇಂದ್ರ ಟಿ.ನರಸೀಪುರದ ಬೆನಕನಹಳ್ಳಿ ಸೂರ್ಯೋದಯ ಫೈನಾನ್ಸ್ ಕಂಪನಿಯಲಿ ಕೆಲಸ ಮಾಡಿದ್ದು, ನಂತರ ನಂಜನಗೂಡು ಶಾಖೆಯಲ್ಲಿ ಆಡಿಟ್ ಆಫೀಸರ್ ಆಗಿ ಬಡ್ತಿ ಪಡೆದಿದ್ದರು.

ಬಳಿಕ ಈತ ನನ್ನ ಕಂಪನಿ ಆಡಳಿತ ಮಂಡಳಿ 2022 ಮದ್ದೂರು ಶಾಖೆಯ ವ್ಯವಸ್ಥಾಪಕರಾಗಿ ವರ್ಗಾವಣೆ ಮಾಡಿತು. ಗಜೇಂದ್ರ ತಮ್ಮ ಅಧಿಕಾರಾವಧಿಯಲ್ಲಿ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದ ಹಾಗೂ ಸಾಲ ಮರುಪಾವತಿ ಮಾಡಿದ್ದ ಗ್ರಾಮೀಣ ಭಾಗದ ಮಹಿಳಾ ಗ್ರಾಹಕರ ಹಣವನ್ನು ಓಟಿಪಿ ಮತ್ತು ಖಾತೆಗಳಿಂದ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.

ಈ ಬಗ್ಗೆ ಕಂಪನಿಯಿಂದ ಸಾಲ ಪಡೆದಿದ್ದ ಹಾಗೂ ಮರು ಪಾವತಿ ಮಾಡಿದ್ದ ಗ್ರಾಹಕರು ಪ್ರಶ್ನೆ ಮಾಡಿದಾಗ ತಾಂತ್ರಿಕ ದೋಷದಿಂದ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿಲ್ಲ. ಮುಂದಿನ 10 ದಿನಗಳಲ್ಲಿ ಹಣ ವರ್ಗಾವಣೆ ಯಾಗುತ್ತದೆ ಎಂದು ಸಬೂಬು ಹೇಳಿ ಎಲ್ಲ 28 ಗ್ರಾಹಕರ 14 ಲಕ್ಷದ 76, ಸಾವಿರದ 788 ರು. ಅನ್ನು ಗಜೇಂದ್ರ ದುರುಪಯೋಗ ಪಡಿಸಿಕೊಂಡು ಪರಾರಿಯಾಗಿದ್ದಾರೆ.

ನಂತರ ನೂತನ ವ್ಯವಸ್ಥಾಪಕ ಪವನ್ ಕುಮಾರ್ ಹಣ ದುರುಪಯೋಗ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಗಜೇಂದ್ರ ಗ್ರಾಹಕರಿಗೆ ಪಂಗನಾಮ ಹಾಕಿರುವ ಹಗರಣ ಬಯಲಿಗೆ ಬಂದಿದೆ.

ಪೊಲೀಸರು ಸೂರ್ಯೋದಯ ಸ್ಮಾಲ್ ಫೈನಾನ್ಸ್ ನಲ್ಲಿನ ಹಗರಣದ ಸಂಪೂರ್ಣ ದಾಖಲೆ ಮತ್ತು ಆರೋಪಿ ಗಜೇಂದ್ರ ಭಾವಚಿತ್ರವನ್ನು ನೀಡುವಂತೆ ಫೈನಾನ್ಸ್ ಕಂಪನಿ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ.