ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತೋಟಗಾರಿಕೆ ಉಪಕರಣಗಳು, ಸಂಶೋಧನೆಗಳ ಕುರಿತು ಮಾಹಿತಿ ನೀಡುವ ಮಳಿಗೆಗಳು. ಹಣ್ಣು, ತರಕಾರಿ, ಹೂವಿನ ಸಸಿಗಳು, ಬೀಜ, ಗೊಬ್ಬರ, ಔಷಧಿ, ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರದಿಯಲ್ಲಿ ನಿಂತಿದ್ದ ರೈತರು, ಅಚ್ಚುಕಟ್ಟಾಗಿ ನಿರ್ಮಿಸಿದ್ದ ತಾಕುಗಳು...
ಇದು ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್‌ಆರ್) ಆವರಣದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಕಂಡ ದೃಶ್ಯಗಳಿವು.
ರಾಷ್ಟ್ರೀಯ ತೋಟಗಾರಿಕೆ ಮೇಳದ ಎರಡನೇ ದಿನವೂ ಸಂಭ್ರಮ ಕಡಿಮೆಯಾಗಿರಲಿಲ್ಲ. ರಾಜ್ಯದ ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಿಂದ ರೈತರು ಆಗಮಿಸುತ್ತಿದ್ದರು. ಹಾಗೆಯೇ ಛತ್ತೀಸ್‌ಗಡ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದಲೂ ರೈತರು ಮೇಳಕ್ಕೆ ಬಂದು ಇಲ್ಲಿನ ಸಂಶೋಧನೆ, ವೈವಿಧ್ಯ ತಳಿಗಳನ್ನು ಕಂಡು ಮೂಕವಿಸ್ಮಿತರಾಗಿದ್ದರು.
ಮೇಳದಲ್ಲಿ ಬಿಇಎಲ್ ಸಂಸ್ಥೆಯ ಡ್ರೋನ್, ಐಐಎಚ್‍ಆರ್ ಅಭಿವೃದ್ಧಿಪಡಿಸಿರುವ ಈರುಳ್ಳಿ ನಾಟಿ ಮಾಡುವ ಯಂತ್ರ, ಯುವಿಬಿ ಲೈಟ್ ಅಡಿಯಲ್ಲಿ ಆವಿಷ್ಕರಿಸಿದ ಅಣಬೆಗಳ ವಿಟಮಿನ್ ಡಿ ಪುಷ್ಟೀಕರಣ ತಂತ್ರಜ್ಞಾನ, ಬಿಳಿ ತಿರುಳಿನ ಡ್ರಾಗನ್ ಫ್ರೂಟ್ ಸೇರಿದಂತೆ ನಾನಾ ವಿಶೇಷಗಳು ಗಮನ ಸೆಳೆದವು. ಮೇಳದಲ್ಲಿ ಹೊಸದಾಗಿ ರೋಗ ನಿರೋಧಕ ಮೆಣಸಿನ ಕಾಯಿಯ ಅರ್ಕ ನಿಹಿರ, ಅರ್ಕ ಧೃತಿ ತಳಿಗಳನ್ನು ಪರಿಚಯಿಸಲಾಗಿತ್ತು. ಉಳಿದಂತೆ ಈ ಹಿಂದೆಯೇ ಅರ್ಕ ಸಾನ್ವಿ, ಅರ್ಕ ತನ್ವಿ, ಅರ್ಕ ತೇಜಸ್ವಿ, ಅರ್ಕ ಯಶಸ್ವಿ, ಅರ್ಕ ಗಗನ್ ಮೆಣಸಿನ ಕಾಯಿ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ತಳಿಗಳು ವೈರಸ್ ನಿರೋಧ ಶಕ್ತಿಯನ್ನು ಹೊಂದಿವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದರು.ಬೀಜ, ಸಸಿಗಳಿಗೆ ಬೇಡಿಕೆ
ಐಐಎಚ್‌ಆರ್ ಅಭಿವೃದ್ಧಿಪಡಿಸಿದ ಆರ್ಕಾ ಮೆಣಸಿನಕಾಯಿ, ಟೊಮೆಟೋ, ಬದನೆಕಾಯಿ ಸೇರಿದಂತೆ ವಿವಿಧ ಅಭಿವೃದ್ಧಿಪಡಿಸಿ ತರಕಾರಿ ತಳಿಗಳ ಬೀಜಗಳು, ಅಲಂಕಾರಿಕ ಗ್ಲಾಡಿಯೋಲಸ್ ತಳಿಯ ಅರ್ಕಾ ಕೇಸರ್, ಬಿಳಿಯ ಬಣ್ಣದ ಜರ್ಬೇರಾ, ಆರ್ಕಾ ನಿರಂತರ (ಸುಗಂಧರಾಜ), ಆರ್ಕಾ ಚೆನ್ನ (ಕನಕಾಂಬರ), ಚೆಂಡು ಹೂವು ಹೀಗೆ ಹಲವು ತಳಿಯ ಹೂವಿನ ತಳಿಯ ಬೀಜಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂತು.25 ಸಾವಿರ ಜನರ ಭೇಟಿ
ಐಐಎಚ್‌ಆರ್ ಮಾಹಿತಿಯಂತೆ ಬುಧವಾರ ಒಂದೇ ದಿನ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ 25 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಮೇಳಕ್ಕೆ ಬರುವ ರೈತರಿಗೆ ಊಟ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ರೈತರು ಒಳಗೊಂಡಂತೆ ಇತರರು ಹಣ್ಣಿನ ಸಸಿಗಳು ₹2 ಲಕ್ಷ, ತರಕಾರಿ ಬೀಜಗಳು ₹1.65 ಲಕ್ಷ ಮತ್ತು ಹೂವಿನ ಬೀಜ ಮತ್ತು ಸಸಿಗಳು ₹1.55 ಲಕ್ಷ ಸೇರಿದಂತೆ ಒಟ್ಟು ₹5.81 ಲಕ್ಷ ವಹಿವಾಟು ನಡೆಸಿದ್ದಾರೆ ಎಂದು ಐಐಎಚ್‌ಆರ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಟ್ಟು ತಿಗಣೆಗೆ ಮೀಲಿಮೆಲ್ಟ್ ರಾಮಬಾಣ
ಬಹುಜಾತಿಯ ಹಿಟ್ಟು ತಿಗಣೆಗಳ(ಮೀಲಿಬಗ್) ನಿಯಂತ್ರಣಕ್ಕೆಂದು ಐಐಎಚ್‌ಆರ್ ವಿಜ್ಞಾನಿಗಳು ಅರ್ಕಾ ಮೀಲಿಮೆಲ್ಟ್ ಎಂಬ ಸಾವಯಕ ದ್ರಾವಕವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಉತ್ಪನ್ನವು ಹಿಟ್ಟು ತಿಗಣೆ ಕರಗಿರುವ ತಂತ್ರಜ್ಞಾನ ಹೊಂದಿದ್ದು, ಇದು ವಿಷಕಾರಿಯಲ್ಲದ ವ್ಯಾಕ್ಸ್ ಸೊಲ್ಯುಬಿಲೈಸರ್‌ಗಳನ್ನು ಒಳಗೊಂಡಿದೆ.
ಉತ್ತಮ ಸ್ಪ್ರೇಯರ್ ಬಳಸಿ ಹಿಟ್ಟುತಿಗಣೆ ಇರುವ ಜಾಗಕ್ಕೆ 70ರಿಂದ 100 ಮಿ.ಲಿಯಷ್ಟು ದ್ರಾವಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಅಲ್ಲದೇ ಎಲ್ಲ ಕೀಟನಾಶಕಗಳ ಜೊತೆಯಲ್ಲೂ ಬೆರೆಸಿ ಸಿಂಪಡಣೆ ಮಾಡಬಹುದಾಗಿದೆ. ಇದರಿಂದಾಗಿ ಗಿಡ, ಮರಗಳಿಗೆ ಬರುವ ಹಿಟ್ಟು ತಿಗಣೆ ಕಾಡವನ್ನು ಸಂಪೂರ್ಣ ತಡೆಗಟ್ಟಬಹುದಾಗಿದೆ. ಅರ್ಕಾ ಮೀಲಿಮೆಲ್ಟ್ ಉತ್ಪನ್ನವು ಯಾವುದೇ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಐಐಎಚ್‌ಆರ್ ವಿಜ್ಞಾನಿಗಳು ತಿಳಿಸಿದ್ದಾರೆ.