ಸಾರಾಂಶ
ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸಹಕಾರ ಸಂಸ್ಥೆಗೆ ರೈತರೇ ಉಸಿರಾಗಿದ್ದು, 62 ವರ್ಷಗಳಿಂದ ರೈತರಿಗೆ ಸ್ಪಂದಿಸುತ್ತಾ ರಾಜ್ಯದಲ್ಲಿಯೇ ಮಾದರಿ ಸಹಕಾರ ಸಂಘ ನಮ್ಮದಾಗಿದೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಇಪ್ಕೋ ಆರ್ಜಿಬಿ ಸದಸ್ಯ ಅಮರೇಶ ಉಪಲಾಪುರ ಹೇಳಿದರು.ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕಿನ್ನಾಳದ 63ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಕಿನ್ನಾಳ ಗ್ರಾಮ ಇಲ್ಲಿಯ ಗೊಂಬೆಯ ಕಲೆ ಹಾಗೂ ಕೃಷಿ ಸಹಕಾರ ಸಂಘದಿಂದ ಹೆಸರುವಾಸಿಯಾಗಿದೆ. ನಮ್ಮ ಸಂಘದಿಂದ ಕೃಷಿ ಸಾಲ ₹7.80ಕೋಟಿ, ಕೃಷಿಯೇತರ ಸಾಲ ₹35.58 ಕೋಟಿ, 78 ಲಕ್ಷ ಠೇವಣಿ ಹೊಂದಿದ್ದು, ರೈತರ ಉಸಿರಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಸಂಘದಲ್ಲಿ 3800 ಸದಸ್ಯರಿದ್ದು, ಅವರ ಸಹಕಾರದಿಂದ 4 ರಾಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ಒಟ್ಟು 24 ಪ್ರಶಸ್ತಿಗಳು ಲಭಿಸಿದೆ. ರೈತರು ಹಾಗೂ ಸದಸ್ಯರು ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ವಿನಂತಿಸಿಕೊಂಡರು.ಕಾರ್ಯದರ್ಶಿ ಚಂದ್ರಶೇಖರ ಕುದರಿಮೋತಿ ಮಾತನಾಡಿದರು.
ವಾರ್ಷಿಕ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಲಾಭಾಂಶದ ₹27 ಲಕ್ಷವನ್ನು ಗೋಡಾನಿನ ಕಾಂಪೌಂಡ್ ನಿರ್ಮಾಣ ಹಾಗೂ ಸಂಘದಿಂದ ಜನೌಷಧಿ ಕೇಂದ್ರ ಪ್ರಾರಂಭಿಸಲು ಒಪ್ಪಿಗೆ ಸೂಚಿಸಲಾಯಿತು. ಕಾಮನ್ ಸರ್ವಿಸ್ ಸೆಂಟರ್ ಉದ್ಘಾಟಿಸಲಾಯಿತು.ಚೆಕ್ ವಿತರಣೆ:
ಇಪ್ಕೋ ಕಂಪನಿಯ ಗೊಬ್ಬರ ಪಡೆದು ಅಕಾಲಿಕ ಮರಣ ಹೊಂದಿದ ರೈತ ಮಲ್ಲಪ್ಪ ಹುದ್ದಾರ ಕುಟುಂಬಕ್ಕೆ ₹1 ಲಕ್ಷ ಚೆಕ್ ನೀಡಲಾಯಿತು.ಈ ಸಂದರ್ಭ ಅಧ್ಯಕ್ಷತೆಯನ್ನು ರವೀಂದ್ರನಾಥ ಕೋಲ್ಕಾರ ವಹಿಸಿದ್ದರು. ಉಪಾಧ್ಯಕ್ಷೆ ಮಲ್ಲಮ್ಮ ಕಾರಬ್ಯಾಳಿ, ನಿರ್ದೇಶಕರಾದ ವೀರಭದ್ರಪ್ಪ ಗಂಜಿ, ಮಹಾದೇವಯ್ಯ ಹಿರೇಮಠ, ಕೆ. ಮಲ್ಲಿಕಾರ್ಜುನ, ಬಸವರಾಜ ಚಿಲವಾಡಗಿ, ವಿರುಪಾಕ್ಷಪ್ಪ ಐತಾಪೂರ, ನಿಂಗಪ್ಪ ಕುಣಿ, ಮೌನೇಶ ಕಳ್ಳಿಮನಿ, ಈರಣ್ಣ ವಾಲ್ಮೀಕಿ, ಬ್ಯಾಂಕ್ ಪ್ರತಿನಿಧಿ ಶಿವಕುಮಾರ ಮೇಳಿ, ಗ್ರಾಪಂ ಅಧ್ಯಕ್ಷ ಕರಿಯಮ್ಮ ಉಪ್ಪಾರ, ಇಪ್ಕೋ ವ್ಯವಸ್ಥಾಪಕ ರಾಘವೇಂದ್ರ ಇತರರು ಇದ್ದರು.