ಗುಂಡ್ಲುಪೇಟೆ ಕ್ರಷರ್‌ ಸುತ್ತಲಿನ ರೈತರು ಘಟಕಕ್ಕೆ ಒಪ್ಪಿಗೆ ನೀಡಿಲ್ಲ

| Published : Nov 02 2024, 01:36 AM IST

ಗುಂಡ್ಲುಪೇಟೆ ಕ್ರಷರ್‌ ಸುತ್ತಲಿನ ರೈತರು ಘಟಕಕ್ಕೆ ಒಪ್ಪಿಗೆ ನೀಡಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಬಳಿ ಕ್ರಷರ್‌ ಘಟಕ ನಿರ್ಮಿಸಲು ಕ್ರಷರ್‌ ಘಟಕದ ಸುತ್ತಮುತ್ತಲಿನ ರೈತರು ಒಪ್ಪಿಗೆ ಸೂಚಿಸಿಲ್ಲ. ಕ್ರಷರ್‌ ಮಾಲೀಕರು ಸುಳ್ಳು ಹೇಳಿ ಅನುಮತಿ ಪಡೆದಿದ್ದಾರೆ ಎಂದು ರೈತರು ತಿಳಿಸಿದರು.

ರೈತರು ಆರ್‌ಟಿಸಿ ಹಿಡಿದು ಹೇಳಿಕೆ । ಸುಳ್ಳು ಹೇಳಿ ಅನಮತಿ । ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಗೆ ರೈತರ ಆಗ್ರಹ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಅಗತಗೌಡನಹಳ್ಳಿ ಬಳಿ ಕ್ರಷರ್‌ ಘಟಕ ನಿರ್ಮಿಸಲು ಕ್ರಷರ್‌ ಘಟಕದ ಸುತ್ತಮುತ್ತಲಿನ ರೈತರು ಒಪ್ಪಿಗೆ ಸೂಚಿಸಿಲ್ಲ. ಕ್ರಷರ್‌ ಮಾಲೀಕರು ಸುಳ್ಳು ಹೇಳಿ ಅನುಮತಿ ಪಡೆದಿದ್ದಾರೆ ಎಂದು ರೈತರು ತಿಳಿಸಿದರು.

ಈ ಕುರಿತು ಅಗತನಹಳ್ಳಿ ಗ್ರಾಮದಲ್ಲಿ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆ (ಆರ್‌ಟಿಸಿ) ಪ್ರದರ್ಶಿಸಿ ರೈತರು ಹೇಳಿದರು. ಕ್ರಷರ್‌ ಮಾಲೀಕ ಎ.ಮಧಸೂದನ್‌ ಕ್ರಸರ್‌ ಘಟಕ ಆರಂಭಿಸಲು ಘಟಕದ ಸುತ್ತ ಮುತ್ತಲಿನ ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ವಾಸ್ತವವಾಗಿ ರೈತರ ಬಳಿಗೆ ಅಧಿಕಾರಿಗಳು ಬಂದು ಮಾಹಿತಿ ಕೇಳಿಲ್ಲ ಹಾಗೂ ರೈತರ ಗಮನಕ್ಕೆ ಬಂದೇ ಇಲ್ಲ ಎಂದು ರೈತರಾದ ಮೂರ್ತಿ, ಅಜಿತ್, ಮಂಗಳಮ್ಮ, ಶಿವಪ್ಪ, ಸೋಮಶೇಖರ್‌, ನಂಜುಂಡಯ್ಯ, ಬಸಪ್ಪ, ಮಹದೇವಪ್ಪ, ಅಂಬಿಕಾ, ಶೀವಮ್ಮ, ನಾಗೇಂದ್ರಪ್ರಸಾದ್‌, ಚಿಕ್ಕಗಂಡಯ್ಯ ದೂರಿದರು.

ಕ್ರಷರ್‌ ಮಾಲೀಕರು ಅಧಿಕಾರಿಗಳಿಗೆ ಆಸೆ, ಆಮಿಷ ತೋರಿಸಿ ಕಚೇರಿಯಲ್ಲಿ ಕುಳಿತು ರೈತರ ಒಪ್ಪಿಗೆ ನೀಡಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೆ ಕ್ರಷರ್‌ ಘಟಕದ ಸುತ್ತಲಿನ ರೈತರು ಒಪ್ಪಿಗೆ ಸೂಚಿಸಿಲ್ಲ. ಆದರೆ ಕ್ರಷರ್‌ ಮಾಲೀಕರು ಕ್ರಷರ್‌ ಘಟಕದ ಸುತ್ತಲಿನ ರೈತರ ಬದಲಿಗೆ ದೂರದ ರೈತರ ಒಪ್ಪಿಗೆ ಪಡೆದಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಷರ್‌ ಘಟಕದ ಸುತ್ತಲಿನ ರೈತರ ಜಮೀನು ನೋಡಬೇಕು. ಫಲವತ್ತಾದ ಜಮೀನಿನ ಬಳಿ ಕ್ರಷರ್‌ ಘಟಕ ಆರಂಭಿಸದಂತೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಕ್ರಷರ್‌ ಆರಂಭಿಸಿದರೆ ಕ್ರಷರ್‌ ಘಟಕದ ರೈತರು ಕೃಷಿ ಮಾಡಲು ಆಗುವುದಿಲ್ಲ. ಒಂದು ವೇಳೆ ಕ್ರಷರ್‌ ಘಟಕ ಆರಂಭಿಸಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಕ್ರಷರ್‌ ಮಾಲೀಕರೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಕೂಡ ರೈತರ ಪರವಾಗಿ ಇರಬೇಕು. ರೈತರು ಹಾಗೂ ಕೃಷಿ ಚಟುವಟಿಕೆಗೆ ಮಾರಕವಾದ ಕ್ರಷರ್‌ ಘಟಕ ಸ್ಥಾಪನೆಗೆ ಕಡಿವಾಣ ಹಾಕಿ ರೈತರ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.