ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ರೈತರು ಉದ್ಯಮಿಗಳಾಗಿ ಬೆಳವಣಿಗೆ ಕಾಣಬೇಕೇ ಹೊರತು ಸಾಲಗಾರರಾಗಬಾರದು. ಫಸ್ಟ್ ಸರ್ಕಲ್ ಮೂಲಕ ಉದ್ಯಮಿ ಒಕ್ಕಲಿಗ ಹೆಸರಿನಲ್ಲಿ ಸಂಸ್ಕರಿತ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅದನ್ನು ಮಾದರಿಯಾಗಿಟ್ಟುಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿಯಲ್ಲಿ ಮಂಡ್ಯ ಬದಲಾಗಬೇಕು ಎಂಬ ಮನೋಭಾವ ಜನರಲ್ಲಿ ಮೂಡಬೇಕು. ರೈತರು ತಾವು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವ ವಿಧಾನವನ್ನು ಕಂಡುಕೊಳ್ಳಬೇಕು. ಆಗ ಮಾರುಕಟ್ಟೆ ತನ್ನಿಂತಾನೇ ಸೃಷ್ಟಿಯಾಗುತ್ತದೆ. ಭತ್ತವನ್ನು ಬೆಳೆದು ಅದನ್ನು ಕಟಾವು ಮಾಡುವ ಹಂತದಲ್ಲೇ ಬೇರೆಯವರಿಗೆ ಮಾರಾಟ ಮಾಡಿದರೆ ಬೆಲೆ ಹೇಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.

ಜಿಲ್ಲೆಯ ಪ್ರತಿ ಮನೆಗಳಲ್ಲೂ ರಾಜಕಾರಣಿಗಳಿದ್ದಾರೆ. ರಾಜಕಾರಣಕ್ಕೆ ನೀಡುವಷ್ಟು ಆಸಕ್ತಿಯನ್ನು ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಕಡೆ ತೋರಿಸುವುದಿಲ್ಲ. ಇದು ನಮ್ಮ ಜಿಲ್ಲೆಯ ರೈತರ ದೌರ್ಬಲ್ಯ. ಇದನ್ನು ಮೆಟ್ಟಿ ನಿಂತು ಪ್ರಗತಿದಾಯಕವಾಗಿ ಆಲೋಚನೆಗಳನ್ನು ಮಾಡಬೇಕು. ಉದ್ಯಮಿಗಳನ್ನು ಸಂಪರ್ಕಿಸುವುದು, ಬೆಳೆಗಳನ್ನು ಮೌಲ್ಯವರ್ಧನೆ ಮಾಡುವ ಕೌಶಲ್ಯ ಸಂಪಾದಿಸಿಕೊಂಡು ಮಾರುಕಟ್ಟೆಗೆ ಉತ್ಪನ್ನಗಳನ್ನು ಇಳಿಸಿದರೆ ಆರ್ಥಿಕವಾಗಿ ಲಾಭ ಗಳಿಸಬಹುದು ಎಂದರು.

ಫುಡ್ ಇಂಡಸ್ಟ್ರಿಗಳು ಸ್ಥಾಪನೆಗೊಳ್ಳುವುದಾದರೆ ಸರ್ಕಾರದ ಗಮನಸೆಳೆದು ಎರಡೇ ದಿನದಲ್ಲಿ ಭೂಪರಿವರ್ತನೆ ಮಾಡಿಕೊಡುವುದಕ್ಕೆ ನಾನು ನಿಮ್ಮ ನೆರವಿಗೆ ನಿಲ್ಲುತ್ತೇನೆ. ಮಂಡ್ಯಕ್ಕೆ ಹೊಸತನ ಬೇಕು. ಫಸ್ಟ್ ಸರ್ಕಲ್‌ನವರು ಹೊಸತನವನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರೊಂದಿಗೆ ಕೈಜೋಡಿಸುವ ಮೂಲಕ ರೈತರು ಉದ್ಯಮಿಗಳಾಗಿ ಬೆಳವಣಿಗೆ ಕಾಣುವಂತೆ ಆಶಿಸಿದರು.


ಮಂಡ್ಯ ವಿಧಾನಸಭಾ ಕ್ಷೇತ್ರ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ೧೫೦೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇನೆ. ಕೊನೆಯ ಭಾಗದ ಎಲ್ಲಾ ರಸ್ತೆಗಳನ್ನೂ ಸುಂದರಗೊಓಳಿಸಿದ್ದೇನೆ. ಮುಂದಿನ ಆರು ತಿಂಗಳಲ್ಲಿ ಇನ್ನೂ ೧೦೦ ಕೋಟಿ ರು. ವೆಚ್ಚದಲ್ಲಿ ಬದಲಾವಣೆ ತರಲಾಗುವುದು ಎಂದು ಭರವಸೆ ನೀಡಿದರು.