ಸಾರಾಂಶ
ನಂಜನಗೂಡು: ಕಬಿನಿ ಅಣೆಕಟ್ಟೆಯಿಂದ 22 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಿದ್ದರಿಂದ ತಾಲೂಕಿನ ರಾಂಪುರ, ಹುಲ್ಲಹಳ್ಳಿ ನಾಲೆಗಳ ಬಯಲಿನಲ್ಲಿ ರೈತರು ಬೆಳೆದ ಫಸಲು ಜಾಲಾವೃತಗೊಂಡು ಹಾಳಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಗುರುವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪರಿಹಾರ ನೀಡಬೇಕೆಂದು ತಹಸೀಲ್ದಾರರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ತಾಲೂಕಿನಲ್ಲಿ ಕಳೆದ 20 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ, ತಾಲೂಕಿನ ಎರಡು ಪ್ರಮುಖ ನಾಲೆಗಳಾದ ರಾಂಪುರ, ಹುಲ್ಲಹಳ್ಳಿ ನಾಲಾ ಅಚ್ಚುಕಟ್ಟು ಪ್ರದೇಶದದಲ್ಲಿ ರೈತರ 15 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಭತ್ತದ ಪಸಲು ಕಟಾವು ಮಾಡಲಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಎಕರೆಗೆ 25 ಸಾವಿರ ಖರ್ಚು ಮಾಡಿ ಬೆಳೆದಿದ್ದ ಭತ್ತದ ಫಸಲು ರೈತರ ಕೈ ಸೇರದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ಸರ್ಕಾರ ಅತಿವೃಷ್ಠಿ, ಅನಾವೃಷ್ಠಿಗಳಿಂದ ಆದ ಬೆಳೆ ನಷ್ಟ ಮತ್ತು ಪ್ರಾಣಿಗಳ ದಾಳಿಯಿಂದ ಉಂಟಾಗುವ ಪ್ರಾಣಹಾನಿಗೆ 10 ಸಾವಿರ ಕೋಟಿ ಪರಿಹಾರ ನಿಧಿ ಕಾಯ್ದಿರಿಸಬೇಕು, ಹುಲ್ಲಹಳ್ಳಿ,ರಾಂಪುರ ಅಚ್ಚುಕಟ್ಟು ಪ್ರದೇಶದಲ್ಲಿ ಆದ ಬೆಳೆ ನಷ್ಟಕ್ಕೆ ಕನಿಷ್ಠ 50 ಸಾವಿರ ಪರಿಹಾರ ಧನ ಘೋಷಿಸಬೇಕು, ಪ್ರತಿ ಬಾರಿ ಕಪಿಲಾ ನದಿ ಪ್ರವಾಹಕ್ಕೆ ಸಿಲುಕಿ ಫಸಲು ನಾಶಕ್ಕೆ ಒಳಗಾಗುತ್ತಿರುವ ರೈತರ ಕುಟುಂಬಗಳ ರಕ್ಷಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್, ಇಮ್ಮಾವು ರಘು, ಶ್ವೇತ, ಮಹದೇವನಾಯಕ, ನಂಜುಂಡ, ಯೋಗಿ, ಶಿವಣ್ಣ, ಶಂಕರ್ ನಾಯ್ಕ, ರಂಗಸ್ವಾಮಿ ನಾಯ್ಕ, ಸಣ್ಣಶೆಟ್ಟಿ, ಗೋವಿಂದನಾಯ್ಕ, ಪೈಲ್ವಾನ್ ಮಹದೇವ ನಾಯ್ಕ, ಪುಟ್ಟಸ್ವಾಮಿ ಇದ್ದರು.