ಕೂಲಿ ಕಾರ್ಮಿಕರ ಕೂಲಿ ಸೇರಿದಂತೆ ಕಬ್ಬು ಬೆಳೆಯುವ ರೈತರ ಖರ್ಚು ದುಪ್ಪಟ್ಟಾಗಿವೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆ ಇಳುವರಿ ಕೂಡ ಸರಿಯಾಗಿ ಬರುತ್ತಿಲ್ಲ
ಹೊಸಪೇಟೆ: ಪ್ರಸಕ್ತ ಸಾಲಿನ ಕಬ್ಬಿನ ದರ ಪ್ರತಿ ಟನ್ ಕಬ್ಬಿಗೆ ₹6 ಸಾವಿರದಿಂದ ₹6500 ಮಾಡುವಂತೆ ಹೊಸಪೇಟೆ ರೈತರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಹೊಸಪೇಟೆ ಹಾಗೂ ಕಮಲಾಪುರ ಭಾಗದ ರೈತರು ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಕೈಕೊಟ್ಟಿರುವುದರಿಂದ ಬರಗಾಲ ವ್ಯಾಪಿಸಿದ್ದು. ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಹೊಸಪೇಟೆ ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಇದರ ಜತೆಗೆ ಬೀಜ, ರಸಗೊಬ್ಬರಗಳ ಬೆಲೆ ಗಗನಕ್ಕೇರಿವೆ.ಕೂಲಿ ಕಾರ್ಮಿಕರ ಕೂಲಿ ಸೇರಿದಂತೆ ಕಬ್ಬು ಬೆಳೆಯುವ ರೈತರ ಖರ್ಚು ದುಪ್ಪಟ್ಟಾಗಿವೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆ ಇಳುವರಿ ಕೂಡ ಸರಿಯಾಗಿ ಬರುತ್ತಿಲ್ಲ.ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಕಬ್ಬಿನ ಬೆಲೆ ಪ್ರತಿ ಟನ್‌ಗೆ 6500 ನಿಗದಿ ಮಾಡುವುದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ರೈತರು ಜಿಲ್ಲಾಧಿಕಾರಿ ಒತ್ತಾಯಿಸಿದರು.ಈ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಬೆಲೆ ನಿದಿ ಮಾಡುವಂತೆ ಹಾಗೂ ಕಳೆದ ಸಾಲಿನ ಕಟಾವು ಮಾಡಿದ ಬಾಕಿ ಹಣ ಪ್ರತಿ ಟನ್‌ಗೆ ₹50 ಕೆಲ ಕಾರ್ಖಾನೆ ಮಾಲೀಕರುಗಳು ಈವರೆಗೆ ನೀಡಿಲ್ಲ. ಈ ಬಗ್ಗೆ ಕೂಡ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ರೈತರು, ಇಲ್ಲದಿದ್ದರೆ ತಾಲೂಕಿನ ರೈತರು ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹೊಸಪೇಟೆ ರೈತ ಸಂಘದ ಕಟಿಗಿ ಜಂಬಯ್ಯ ನಾಯಕ, ನಾಗರಾಜ್ ಪರಸಪ್ಪ, ಮಟ್ಟಿ ಮೈಲಾರಿ, ಕಣಿವೆಹಳ್ಳಿ ವೆಂಕೋಬಣ್ಣ, ಕಮಲಾಪುರ ಭಾಗದ ರೈತ ಮುಖಂಡ ಎಂ.ಜೆ.ಜೋಗಯ್ಯ, ಬಾಣದ ರಾಘವೇಂದ್ರ, ಅಂಜಿನಪ್ಪ, ಜಾಕಿರ್ ಹುಸೇನ್, ಗಾದಿಲಿಂಗಪ್ಪ ಸೇರಿದಂತೆ ಇತರರು ಇದ್ದರು.