ಕನ್ನಡಪ್ರಭ ವಾರ್ತೆ ಬೇಲೂರು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರ ಹಾಗೂ ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕ ಎಚ್ ಕೆ ಸುರೇಶ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ರೈತ ಸಂಘದ ತಾಲೂಕು ಅಧ್ಯಕ್ಷ ಬೋಗ ಮಲ್ಲೇಶ್ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದೇ ಬೆಳೆಗಳು ನಾಶವಾಗುತ್ತಿದ್ದು, ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಬೇಕು. ವಿದ್ಯುತ್ ಇಲಾಖೆ ಸರಿಯಾಗಿ ವಿದ್ಯುತ್ ಸಂಪರ್ಕ ನೀಡದೆ ರೈತರನ್ನು ಗೋಳಾಡಿಸುತ್ತಿದೆ. ರೈತರ ಬದುಕು ಬೀದಿಗೆ ಇದ್ದಂತಾಗಿದೆ. ರೈತರ ಗೋಳಿನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಸ್ಥಳೀಯ ಶಾಸಕ ಎಚ್ ಕೆ ಸುರೇಶ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡದೆ ಸಂಬಂಧವಿಲ್ಲದಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದರು. ಜೋಳಕ್ಕೆ ಬಿಳಿ ಸುಳಿ ರೋಗ ಹರಡಿ ಸಂಪೂರ್ಣ ಬೆಳೆ ಹಾಳಾಗುತ್ತಿದ್ದರು ಸರ್ಕಾರ ಪರಿಹಾರವನ್ನು ನೀಡುತ್ತಿಲ್ಲ. ಹಳೇಬೀಡು ಮಾದಿ ಹಳ್ಳಿ ಏತ ನೀರಾವರಿ ಕಾಲುವೆಯಲ್ಲಿ ಹೂಳನ್ನು ತೆಗೆಯದೆ ನೀರನ್ನು ಬಿಟ್ಟಿರುವುದು ಬೆಳೆಗಳು ರೋಗಕ್ಕೆ ಕಾರಣವಾಗಿದೆ. ಸರ್ಕಾರ ರೈತರ ಪರವಿಲ್ಲದೆ ವಿರೋಧಿ ನೀತಿ ಅನುಸರಿಸುತ್ತಿದೆ, ಕೂಡಲೇ ರೈತರ ಸಂಕಷ್ಟವನ್ನು ಪರಿಹಾರ ಮಾಡಲು ಮುಂದಾಗಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸ್ವಾಮಿ ಗೌಡ ಮಾತನಾಡಿ, ಬೇಲೂರು ತಾಲೂಕಿನಲ್ಲಿ 2004ರಿಂದ ಈಚೆಗೆ ಸುಮಾರು ಐವತ್ತೂ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ರೈತರ ಜಮೀನನ್ನು ಮತ್ತೆ ಸರ್ಕಾರ ವಶಪಡಿಸಿಕೊಳ್ಳಲು ಹವಣಿಸುತ್ತಿರುವುದು ತಪ್ಪು ನಿರ್ದಾರ. ರೈತರ ಹೆಸರಿನಲ್ಲಿ ಪಾಣಿ, ಸಾಗುವಳಿ ಚೀಟಿ ನೀಡಿದ್ದರೂ ತನಿಖೆ ಹೆಸರಿನಲ್ಲಿ ರೈತರನ್ನು ಕಳ್ಳರಂತೆ ಬಿಂಬಿಸಿ ಕಿರುಕುಳ ಕೊಡುತ್ತಿದ್ದರೂ ಶಾಸಕರು ಮೌನ ವಹಿಸಿರುವುದು ಹಲವಾರು ಕಾರಣಕ್ಕೆ ದಾರಿ ಮಾಡಿಕೊಟ್ಟಿದೆ. ಕೆಲ ರಾಜಕಾರಣಿಗಳಿಗೆ ಸಹಾಯ ಮಾಡಲು ಭೂಮಿಯನ್ನು ತಮ್ಮ ವಶಕ್ಕೆ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ಇದೆ. ರೈತರನ್ನು ಬೀದಿಗೆ ತಂದು ಸಿರಿವಂತರ ಹಿತಾಶಕ್ತಿ ನೋಡುತ್ತಿರುವುದು ಸರಿಯಲ್ಲ, ರೈತರನ್ನು ಕೆಣಕಿದರೆ ಯಾವುದೇ ಸರ್ಕಾರಗಳಿರಲಿ ಪ್ರತಿಭಟನೆ ಮೂಲಕ ಸರ್ಕಾರಗಳನ್ನು ಇಳಿಸಲು ಸಿದ್ಧ, ಬಗರ್‌ಹುಕುಂ ಸಾಗುವಳಿ ಚೀಟಿ ಹಾಗೂ ಪಹಣಿ ಹೊಂದಿರುವ ರೈತರನ್ನು ಅವರ ಭೂಮಿಯಲ್ಲಿ ಉಳುಮೆ ಮಾಡಲು ಬಿಡಬೇಕು. ರೈತರ ಬದುಕನ್ನು ಹಾಳು ಮಾಡಲು ಪ್ರಯತ್ನಪಟ್ಟರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.ಈಗಾಗಲೇ ರೈತರ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದರೂ ಈ ಬಗ್ಗೆ ಸರ್ಕಾರ ಗಮನಹರಿಸದೆ ಲೂಟಿ ಹೊಡೆಯುವ ಯೋಜನೆಗಳಿಗೆ ಕೈ ಹಾಕುತ್ತಿದೆ. ಸ್ಥಳೀಯ ಶಾಸಕ ಎಚ್ ಕೆ ಸುರೇಶ್ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಗುದ್ದಲಿಪೂಜೆ, ಮದುವೆ ಸಮಾರಂಭ, ಸಾವಿನ ಮನೆ ಭೇಟಿ ಇತರೆ ಕಾರ್ಯಕ್ರಮಗಳಿಗೆ ಸೀಮಿತರಾಗಿದ್ದಾರೆ. ಶಾಸಕರು ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದಿದ್ದರೂ ರೈತರ ಸಮಸ್ಯೆಗಳಿಗೆ, ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿ ಕೊಡುತ್ತಿಲ್ಲ. ಅವರು ಸರ್ಕಾರದ ಜೊತೆ ಕೈಜೋಡಿಸಿ ಮುಂದಿನ ಚುನಾವಣೆಗೆ ಸಿದ್ದರಾಗುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು, ಆನೆ ಹಾಗೂ ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಬೇಕು. ಆನೆಗಳನ್ನು ಹಾಸನ ಜಿಲ್ಲೆಯಿಂದ ಸ್ಥಳಾಂತರಿಸಬೇಕು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಕೂಡಲೇ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಗಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಶಾಸಕರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಹಲವಾರು ರೈತರು ಟ್ರ್ಯಾಕ್ಟರ್‌ ಮುಕಾಂತರ ಬಸವೇಶ್ವರ್ ವೃತ್ತದಿಂದ ತಾಲೂಕು ಕಚೇರಿ ವರೆಗೆ ಜಾಥಾ ನಡೆಸಿದರು ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಕಾರ್ಯದರ್ಶಿ ಬಸವರಾಜ್, ಕುಮಾರ್‌, ಸುರೇಶ್, ಶ್ರೀನಿವಾಸ್, ಮುಂತಾದವರಿದ್ದರು.