- ಬಂಗಾರಪ್ಪ ಸರ್ಕಾರದಂತೆ ಸುಗ್ರೀವಾಜ್ಞೆ ಹೊರಡಿಸಿ: ಮಂಡಲೂರು ವಿಶ್ವನಾಥ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ರೈತರು ನಂತರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಆಡಳಿತ ಯಂತ್ರದ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.

ಮಂಡಲೂರು ವಿಶ್ವನಾಥ ಮಾತನಾಡಿ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯು ನಿರ್ಧಾರವನ್ನು ಸಾರಾಸಗಟಾಗಿ, ತಿರಸ್ಕರಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಹಿಂದೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರಂತೆ ದಿಟ್ಟ ಕ್ರಮ ಕೈಗೊಳ್ಳಬೇಕು. ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದರು.


ತೀವ್ರ ಬರಕ್ಕೆ ತುತ್ತಾಗಿರುವ ಕರ್ನಾಟಕದಲ್ಲಿ ಯಾವುದೇ ಜಲಾಶಯಗಳಲ್ಲೂ ನೀರು ಇಲ್ಲದಂತಹ ಪರಿಸ್ಥಿತಿ ಇದೆ. ಕೆಆರ್‌ಎಸ್‌ನಲ್ಲಿ 10-12 ಟಿಎಂಸಿ ಮಾತ್ರ ನೀರು ಇದೆ. ಅದರಲ್ಲಿ ಅರ್ಧದಷ್ಟು ನೀರು ಮಾತ್ರ ಬಳಕೆಗೆ ಸಾಧ್ಯವಿದೆ. ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣವು ಅತ್ಯಂತ ಕಡಿಮೆ ಇರುವುದು ಅರಿವಿದ್ದರೂ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯು ಪ್ರತಿದಿನ ಕೆಆರೆಸ್‌ನಿಂದ 3500 ಕ್ಯುಸೆಕ್‌ನಂತೆ 15 ದಿನಗಳ ಕಾಲ ನೆರೆಯ ತಮಿಳುನಾಡಿಗೆ ಹರಿಸುವಂತೆ ನಿರ್ಧರಿಸಿ, ಆದೇಶ ಹೊರಡಿಸಿರುವುದು ದುರಾದೃಷ್ಟದ ಸಂಗತಿ. ಇದು ಕರ್ನಾಟಕದ ಅದರಲ್ಲೂ ಕಾವೇರಿ ನೀರು ಅವಲಂಬಿತ ರೈತರು, ಕಾವೇರಿ ನೀರನ್ನು ಆಶ್ರಯಿಸಿದ ನಗರ, ಗ್ರಾಮೀಣರ ಬದುಕಿಗೆ ಸಂಕಷ್ಟ ತಂದೊಡ್ಡುವ ನಿರ್ಧಾರವಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತು ಕರ್ನಾಟಕದ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಕರ್ನಾಟಕ ರೈತರ ಕಾಪಾಡುವತ್ತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧತೆ, ರೈತಪರ, ಜನಪರ ಕಾಳಜಿ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.

ಸಂಘದ ಎಸ್.ಜೆ.ಕಲ್ಲೇಶ, ಗುಡಾಳ್‌ ಡಿ.ಕೆ.ವೆಂಕಟೇಶ, ಜಿ.ಎಸ್.ಹಾಲೇಶ, ಮಲಲಿಕಾರ್ಜುನ, ಕಡ್ಲೇಬಾಳು ಚಂದ್ರಶೇಖರ, ಡಿ.ದಿನೇಶ, ರಾಜಣ್ಣ, ನಾಗನೂರು ಡಿ.ವೀರಣ್ಣ, ಕೋಡಿಹಳ್ಳಿ ರಾಜಣ್ಣ, ಸಿದ್ದನೂರು ರಮೇಶ, ಸಿದ್ದನೂರು ಮಂಜಣ್ಣ, ಅತ್ತಿಗೆರೆ ಮಹೇಶ, ನಾಗಣ್ಣ ಇತರರು ಇದ್ದರು.

- - -

(ಕೋಟ್‌) ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಮತ್ತು ಸಿಬ್ಲ್ಯುಎಂಸಿ ಆದೇಶ ಮಾಡಿವೆ. ಯಾವುದೇ ಕಾರಣಕ್ಕೂ ಇಂತಹ ಆದೇಶವನ್ನು ರಾಜ್ಯ ಸರ್ಕಾರ ಒಪ್ಪಬಾರದು. ರಾಜ್ಯದ ರೈತರು, ಜನರ ಹಿತದೃಷ್ಟಿಯಿಂದ ಹಿಂದೆ ಎಸ್‌.ಬಂಗಾರಪ್ಪ ನೇತೃತ್ವದ ಸರ್ಕಾರದ ಕೈಗೊಂಡ ಕ್ರಮದಂತೆ ಈಗಿನ ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ.

- ಮಂಡಲೂರು ವಿಶ್ವನಾಥ, ತಾಲೂಕು ಅಧ್ಯಕ್ಷ.

- - -

-1ಕೆಡಿವಿಜಿ1, 2: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಂಡಲೂರು ವಿಶ್ವನಾಥ ನೇತೃತ್ವದಲ್ಲಿ ಶನಿವಾರ ದಾವಣಗೆರೆಯಲ್ಲಿ ಪ್ರತಿಭಟಿಸಲಾಯಿತು.