ಮಂಡ್ಯ ಜಿಲ್ಲೆಯ ಎಲ್ಲ ೭ ತಾಲೂಕುಗಳನ್ನು ‘ಬರ ಪ್ರದೇಶಗಳು’ ಎಂದು ಘೋಷಣೆ ಮಾಡಿರುವುದರಿಂದ ರೈತರು, ಕೃಷಿ ಕಾರ್ಮಿಕರು ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಎಲ್ಲ ರೀತಿಯ ಸಾಲಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕು ಎಂದು ರೈತ ಸಂಘ ಆಗ್ರಹ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಎಲ್ಲ ೭ ತಾಲೂಕುಗಳನ್ನು ‘ಬರ ಪ್ರದೇಶಗಳು’ ಎಂದು ಘೋಷಣೆ ಮಾಡಿರುವುದರಿಂದ ರೈತರು, ಕೃಷಿ ಕಾರ್ಮಿಕರು ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಎಲ್ಲ ರೀತಿಯ ಸಾಲಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಕುಟುಂಬದ ನಿರ್ವಹಣೆಗೆ ಹೊಸದಾಗಿ ಸಾಲಗಳನ್ನು ನೀಡಬೇಕು. ಬರ ಪರಿಹಾರ ಮತ್ತು ಬೆಳೆ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಿ ರೈತರ ಖಾತೆಗಳಿಗೆ ಜಮೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ೫೦ ರು. ಬಾಕಿ ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು. ಅಲ್ಲದೇ, ಕಬ್ಬಿಗೆ ಟನ್ ಒಂದಕ್ಕೆ ಶೇ.೮.೫ ಇಳುವರಿಗೆ ೫ ಸಾವಿರ ರೂ. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಪಡೆದಿರುವ ಚಿನ್ನಾಭರಣಗಳ ಮೇಲಿನ ಸಾಲದ ಬಡ್ಡಿಯನ್ನು ರಿಯಾಯ್ತಿ ನೀಡವಂತೆ ಹಾಗೂ ಚಿನ್ನಾಭರಣಗಳನ್ನು ಬ್ಯಾಂಕ್‌ಗಳು ಹರಾಜು ಮಾಡಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಮನೆಗಳ ಮೇಲಿನ ಅಡಮಾನ ಸಾಲ ಇನ್ನಿತರೆ ಸಾಲಗಾರರಿಗೆ ಕಿರುಕುಳ ನೀಡಬಾರದು ಎಂದು ಸೂಚಿಸುವಂತೆ ಆಗ್ರಹಿಸಿದು.
ಬೆಂಗಳೂರಿಗ ೬ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಶಾಶ್ವತವಾಗಿ ರದ್ದುಪಡಿಸಬೇಕು. ತಪ್ಪಿದ್ದಲ್ಲಿ ಮುಂದೆ ತೀವ್ರತರದ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಈ ಹಿಂದೆ ನಡೆದಿದ್ದ ಹಾಲು-ನೀರು ಹಗರಣದಲ್ಲಿ ಸಿ.ಐ.ಡಿ. ತನಿಖೆಯಿಂದ ಯಾವುದೇ ಸತ್ಯ ಹೊರಬರದಿರುವ ಕಾರಣ ಸಿಬಿಐಗೆ ಒಪ್ಪಿಸಬೇಕು. ಹಾಲಿನ ಪುಡಿ ಕಲಬೆರಕೆ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಪೊಲೀಸ್ ಇಲಾಖೆ ಕ್ರಮ ಜರುಗಿಸಿರುವುದಿಲ್ಲ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಒಕ್ಕೂಟಕ್ಕೆ ಉಂಟಾಗಿರುವ ನಷ್ಟವನ್ನು ಭರಿಸಬೇಕು ಮತ್ತು ಅವರನ್ನು ಕಾನೂನಿನ ರೀತ್ಮಾ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಿ.ಎಸ್.ಲಿಂಗಪ್ಪಾಜಿ, ರವಿಕುಮಾರ್, ಎಂ.ಎಸ್.ವಿಜಯ್ ಕುಮಾರ್, ಪಿ.ನಾಗರಾಜು ಕೆನ್ನಾಳು, ಪಿ.ಬಾಲಕೃಷ್ಣ, ಬೋರಾಪುರ ಶಂಕರೇಗೌಡ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.