ಜಿಲ್ಲೆಯ ಸರ್ವೇ ಇಲಾಖೆ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಶ್ರೀಮಂತರು ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳ ಅರಮನೆಯಾಗಿ ಮಾರ್ಪಟ್ಟಿದೆ.

ಸರ್ವೇ ಇಲಾಖೆಯಲ್ಲಿ ಹುದ್ದೆ ತುಂಬಿ । ಧೂಳು ಹಿಡಿಯುತ್ತಿರುವ ರೈತರ ಕಡತಗಳಿಗೆ ಮುಕ್ತಿ ನೀಡಲು ಆಗ್ರಹ

ಕನ್ನಡಪ್ರಭ ವಾರ್ತೆ ಕೋಲಾರ

ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಟೇಬಲ್ ಮೇಲೆ ಧೂಳು ಹಿಡಿಯುತ್ತಿರುವ ರೈತರ ಕಡತಗಳಿಗೆ ಮುಕ್ತಿ ನೀಡಬೇಕೆಂದು ಒತ್ತಾಯಿಸಿ ಶನಿವಾರ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಸರ್ವೆ ಇಲಾಖೆಯ ಅಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಜಿಲ್ಲೆಯ ಸರ್ವೇ ಇಲಾಖೆ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಶ್ರೀಮಂತರು ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳ ಅರಮನೆಯಾಗಿ ಮಾರ್ಪಟ್ಟಿದೆ. ಬಡ ರೈತ ಸರ್ವೆಗಾಗಿ ಅರ್ಜಿ ಸಲ್ಲಿಸಿ ತಿಂಗಳಾಗಟ್ಟಲೆ ಇಲಾಖೆಗೆ ಅಲೆದಾಡಿದರು ಸರ್ವೇ ಅಧಿಕಾರಿಗಳಿಗೆ ಸಿಬ್ಬಂದಿ ಕೊರತೆ ಆದರೆ ಶ್ರೀಮಂತರು ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳು ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆ ಅಂಗಳಗಳನ್ನು ಒತ್ತುವರಿ ಮಾಡಿಕೊಂಡಿರುವ ಶ್ರೀಮಂತರ ಜಮೀನುಗಳಿಗೆ ೨೪ ಗಂಟೆಯಲ್ಲಿ ಸರ್ವೆ ಮಾಡಿ ದುರಸ್ತಿ ಕಡತ ಮನೆ ಬಾಗಿಲಿಗೆ ತಲುಪಿಸುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವೇ ಇಲಾಖೆಯಲ್ಲಿ ರೈತರು ಕೃಷಿ ಜಮೀನು ಸೇರಿದಂತೆ ವಿವಿಧ ಆಸ್ತಿಗಳ ಸರ್ವೆ ಕಾರ್ಯ ವಿಳಂಬವಾಗುತ್ತಿದ್ದು, ಹದ್ದುಬಸ್ತು, ತಾತ್ಕಾಲಿಕ ಪೋಡಿ, ಇಸ್ವತ್ತು ಸೇರಿದಂತೆ ಜಮೀನುಗಾಗಿ ಸರ್ವೆ ಅರ್ಜಿ ಸಲ್ಲಿಸಿರುವ ಬಡ ರೈತ ಕೂಲಿ ಕಾರ್ಮಿಕರು ಸರ್ವೆ ಅಧಿಕಾರಿಗಳಿಗಾಗಿ ಜಾತಕ ಪಕ್ಷಿಗಳಂತೆ ಸರ್ವೇ ಇಲಾಖೆ ಮುಂದೆ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಅವ್ಯವಸ್ಥೆ ವಿರುದ್ಧ ಕಿಡಿಕಾಡಿದರು.

ಇ-ಆಸ್ತಿ ಖಾತೆ ಬದಲಾವಣೆ ಆಸ್ತಿ ವರ್ಗಾವಣೆ ಸರ್ವೇ ಸ್ಕೆಚ್, ಕಡ್ಡಾಯವಾಗಿದೆ. ಸಕಾಲದಲ್ಲಿ ಸರ್ವೇಕಾರ್ಯ ನಡೆಯದ ಕಾರಣ ರೈತರಿಗೆ ಅಗತ್ಯ ದಾಖಲೆಗಳು ದೊರೆಯದಾಗಿದೆ. ನಕ್ಷೆ ಹದ್ದುಬಸ್ತು ಗುರುತಿಸುವಿಕೆ, ಜಮೀನು ಮಾರಾಟ ದಾನ ನೀಡಿಕೆ, ಪೋಡಿ ಪ್ರಕ್ರಿಯೆ ಪ್ರಮಾಣ ಕಡಿಮೆಯಾಗಿದೆ. ಹಿಸ್ಸಾ ಪ್ರಕ್ರಿಯೆ ಹಕ್ಕು ಬದಲಾವಣೆಗೂ ತೊಡಕು ಆಗುತ್ತಿದೆ. ಇದರ ಜೊತೆಗೆ ಭೂ ದಾಖಲೆಗಳ ಇಲಾಖೆ ಆದಾಯಕ್ಕೂ ಹೊಡೆತ ಬಿದಿದ್ದೆ ಎಂದು ಆರೋಪ ಮಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರೈತರು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಸರ್ವೇ ಸ್ಕೆಚ್‌ಗಾಗಿ ರೈತರು ಸಲ್ಲಿಸಿರುವ ಅರ್ಜಿಗಳು ಮೇಲ್ವಿಚಾರಕರ ಟೇಬಲ್‌ಗಳ ಮೇಲೆಯೇ ಧೂಳು ಹಿಡಿಯುತ್ತಿದೆ. ಜೊತೆಗೆ ಆರ್‌ಟಿಸಿ ದುರಸ್ತಿಗೂ ಅರ್ಜಿ ಹಾಕಿ ಕೆಲಸ ಕಾರ್ಯಬಿಟ್ಟು ತಹಸೀಲ್ದಾರ್ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ರೈತರನ್ನು ಕಾಲಕಸದಂತೆ ಕಾಣುವ ಜೊತೆಗೆ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಇರುವ ಗೌರವ ಅನ್ನದಾತನಿಗೆ ಇಲ್ಲದಂತಾಗಿದೆ. ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.

ಸರ್ವೇ ಇಲಾಖೆ ಕಾನೂನು ಪ್ರಕಾರ ಅರ್ಜಿ ಸಲ್ಲಿಸಿದ ೩೦ ದಿನದ ಒಳಗೆ ಅದು ವಿಲೇವಾರಿಯಾಗಬೇಕೆಂಬ ನಿಯಮವಿದೆ. ಆದರೆ ಸಲ್ಲಿಸಿದ ಅರ್ಜಿ ೩೦೦ ದಿನವಾದರೂ ಸರ್ವೆ ಇಲಾಖೆಯ ಗಣಕ ಯಂತ್ರದಲ್ಲಿ ಭದ್ರವಾಗಿ ನಮೂದಾಗಿರುತ್ತದೆ. ರೈತರ ಅರ್ಜಿಗೆ ಮುಕ್ತಿ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ, ಸರ್ವೆರ್ ಸಮಸ್ಯೆ ಮತ್ತಿತರ ನೂರೊಂದು ನೆಪ ಹೇಳಿ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ವಾರದೊಳಗೆ ಸರ್ಕಾರಕ್ಕೆ ಪತ್ರ ಬರೆದು ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನಿವಾರಿಸಿ ಟೇಬಲ್ ಮೇಲೆ ಧೂಳು ಹಿಡಿಯುತ್ತಿರುವ ರೈತರ ಕಡತಗಳಿಗೆ ಮುಕ್ತಿಗೊಳಿಸಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕದೆ ಇದ್ದರೆ ರೈತರ ಬೆಳೆ ಸಮೇತ ಶಾಸಕರ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸರ್ವೆ ಇಲಾಖೆಯ ಅಧಿಕಾರಿಗಳು, ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ರೈತರ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುದುವಾಡಿ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ರಾಜೇಶ್, ನಾಗರಾಜ, ಹೆಬ್ಬಣಿ ಆನಂದರಡ್ಡಿ, ಮಂಗಸಂದ್ರ ತಿಮ್ಮಣ್ಣ, ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ಸುಪ್ರೀಂಚಲ, ಗಿರೀಶ್, ಪುತ್ತೇರಿ ರಾಜು, ಶೈಲಜ, ರತ್ನಮ್ಮ, ಗೌರಮ್ಮ ಚೌಡಮ್ಮ ಸುಶೀಲಮ್ಮ ಇದ್ದರು.