ಸಾರಾಂಶ
ಕನಕಪುರ: ರೈತರು ಸೂಕ್ತ ದಾಖಲೆಗಳನ್ನು ನೀಡಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕಾಡಹಳ್ಳಿ ಗ್ರಾಪಂ ಪಿಡಿಒ ಕೃಷ್ಣ ತಿಳಿಸಿದರು.
ತಾಲೂಕಿನ ಸಾತನೂರು ಹೋಬಳಿಯ ಕಾಡಹಳ್ಳಿ ಗ್ರಾಮ ಪಂಚಾಯತಿಯಲ್ಲಿ 2025-26ನೇ ಸಾಲಿನ ಕಾಮಗಾರಿಗಳ ಆಯ್ಕೆ ಮತ್ತು ಅನುಮೋದನೆ ಪಡೆದುಕೊಳ್ಳುವ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರತಿ ವಾರ್ಡ್‌ಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಿ ಆದ್ಯತೆ ಮೇರೆಗೆ ಕಾಮಗಾರಿಗಳ ಪಟ್ಟಿ ಮಾಡಲಾಗಿದೆ. ವಾರ್ಡ್ ಸಭೆಗಳಲ್ಲಿ ಆಯ್ಕೆಯಾದ ಕಾಮಗಾರಿಗಳನ್ನು ಗ್ರಾಮಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಲೋಪದೋಷಗಳು ಆಗದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಯಾವುದೇ ಕಾಮಗಾರಿ ಕೈಗೊಳ್ಳಬೇಕಾದರೂ ನಿಯಮಗಳನ್ನು ಪಾಲಿಸಬೇಕು. ರೈತರು ವೈಯಕ್ತಿಕ ಕಾಮಗಾರಿಗಳಾದ ಮೇಕೆ, ಕುರಿ, ಕೋಳಿ ಶೆಡ್ಡು, ದನದ ಕೊಟ್ಟಿಗೆ, ಕಂದಕ, ಬದು ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡು ನರೇಗಾ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ರೇಷ್ಮೆ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಮಾತನಾಡಿ, ರೇಷ್ಮೆ ಕೃಷಿ ಅತ್ಯಂತ ಲಾಭದಾಯಕ ಉದ್ಯಮವಾಗಿ ಅಭಿವೃದ್ಧಿ ಆಗುತ್ತಿದೆ. ಆದರೆ ರೇಷ್ಮೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಬೇರು ಕೊಳೆ ರೋಗ ಬರುತ್ತಿದ್ದು ಅದರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ. ರೇಷ್ಮೆ ತೋಟದಲ್ಲಿ ಬೇರು ಕೊಳೆರೋಗ ಕಾಣಿಸಿಕೊಂಡರೆ ಆ ಗಿಡಗಳನ್ನು ಬೇರು ಸಮೇತ ತೆಗೆದು ಸುಡಬೇಕು. ಹೆಚ್ಚಿನ ಗಿಡಗಳಲ್ಲಿ ರೋಗ ಕಾಣಿಸಿಕೊಂಡರೆ ಇಡೀ ತೋಟವನ್ನೇ ಬದಲಾಯಿಸಿ ಎರಡು ಮೂರು ವರ್ಷಗಳ ಕಾಲ ಬೇರೆ ಕೃಷಿ ಮಾಡಿ ನಂತರ ರೇಷ್ಮೆ ನಾಟಿ ಮಾಡಬೇಕು. ಆಗ ಮಾತ್ರ ಬೇರು ಕೊಳೆ ರೋಗ ತಡೆಗಟ್ಟಲು ಸಾಧ್ಯವಾಗಲಿದೆ. ರೇಷ್ಮೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಿದರು.ಸಭೆಯಲ್ಲಿ ಹಲಸೂರು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಡಿ.ಬಿ.ಶಿವಣ್ಣ ನೋಡಲ್ ಅಧಿಕಾರಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಗ್ರಾಪಂ ಅಧ್ಯಕ್ಷೆ ರುಕ್ಮಿಣಮ್ಮ, ಉಪಾಧ್ಯಕ್ಷ ಕಾಂತರಾಜು, ಕರ ವಸೂಲಿಗಾರ ರಮೇಶ್ ಸೇರಿದಂತೆ ಪಂಚಾಯಿತಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.
ಕೆ ಕೆ ಪಿ ಸುದ್ದಿ 04:ಕಾಡಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ನೋಡಲ್ ಅಧಿಕಾರಿ ಹಲಸೂರು ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಡಿ.ಬಿ.ಶಿವಣ್ಣ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))