ರೈತರೇ ಹಿಪ್ಪುನೇರಳೆ ಗಿಡಕ್ಕೆ ಬರುವ ಬೇರುಕೊಳೆ ರೋಗ ತಡೆಗಟ್ಟಿ

| Published : Sep 02 2025, 01:00 AM IST

ಸಾರಾಂಶ

ಹಿಪ್ಪು ನೇರಳೆ ಬೆಳೆದ ರೈತರ ತೋಟಕ್ಕೆ ಬೇರುಕೊಳೆ ರೋಗ ಒಂದು ಶಿಲೀಂಧ್ರದಿಂದ ಹರಡುತ್ತದೆ, ಇದು ಒಂದು ಗಿಡಕ್ಕೆ ಬಂದರೆ ಮಾರಕವಾಗಿ ಇಡೀ ಜಮೀನನ್ನು ನಾಶಪಡಿಸುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹತೋಟಿಗೆ ತರದಿದ್ದರೆ ಇಡೀ ಹಿಪ್ಪು ನೇರಳೆ ತೋಟವನ್ನು ನಾಶಪಡಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ರೈತರ ಜೀವನಾಡಿ ರೇಷ್ಮೆ ಬೆಳೆಯ ಹಿಪ್ಪುನೇರಳೆ ಸೊಪ್ಪಿನ ಗಿಡಕ್ಕೆ ಬೇರು ಕೊಳೆ ರೋಗ ಹರಡುತ್ತಿದೆ. ಅದನ್ನು ತಡೆಗಟ್ಟಲು ರೇಷ್ಮೆ ಇಲಾಖೆಯಿಂದ ಸಿಗುವ ಔಷಧಿಗಳನ್ನು ಬಳಸುವಂತೆ ಮದ್ದೂರು ವಿಭಾಗದ ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಶಿವಕುಮಾರ್ ತಿಳಿಸಿದರು.

ಮುತ್ತತ್ತಿ ರಸ್ತೆಯ ಕರಲಕಟ್ಟೆ ಗ್ರಾಮದ ಚಿಕ್ಕರಾಜು ಜಮೀನಿನಲ್ಲಿ ಹಲಗೂರಿನ ತಾಂತ್ರಿಕ ಸೇವಾ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಹಿಪ್ಪುನೇರಳೆ ತೋಟಕ್ಕೆ ಇತ್ತೀಚೆಗೆ ಯಥೇಚ್ಛವಾಗಿ ಹರಡುತ್ತಿರುವ ಬೇರು ಕೊಳೆ ರೋಗದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.

ಹಿಪ್ಪು ನೇರಳೆ ಬೆಳೆದ ರೈತರ ತೋಟಕ್ಕೆ ಬೇರುಕೊಳೆ ರೋಗ ಒಂದು ಶಿಲೀಂಧ್ರದಿಂದ ಹರಡುತ್ತದೆ, ಇದು ಒಂದು ಗಿಡಕ್ಕೆ ಬಂದರೆ ಮಾರಕವಾಗಿ ಇಡೀ ಜಮೀನನ್ನು ನಾಶಪಡಿಸುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹತೋಟಿಗೆ ತರದಿದ್ದರೆ ಇಡೀ ಹಿಪ್ಪು ನೇರಳೆ ತೋಟವನ್ನು ನಾಶಪಡಿಸಬೇಕಾಗುತ್ತದೆ ಎಂದರು.

ಒಂದು ರೋಗ ಅಕ್ಕಪಕ್ಕದ ಜಮೀನುಗಳಿಗೂ ಹರಡುತ್ತದೆ. ಇದಕ್ಕೆ ಇದಕ್ಕೆ ನಾವು ಬಳಸುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗುತ್ತಿರುವುದೇ ಕಾರಣ ಎಂದು ತಿಳಿಸಿದರು.

ನಾವು ಹಾಯಿಸುವ ನೀರು ಒಂದು ಗಿಡದಿಂದ ಮತ್ತೊಂದು ಗಿಡದ ಮೂಲಕ ಮತ್ತು ಭೂಮಿ ಮುಖಾಂತರ ಕೂಡ ಹರಡುತ್ತದೆ. ಇದನ್ನು ಹತೋಟಿಗೆ ತರಲು ನಮ್ಮಲ್ಲಿ ತಿಳಿಸುವಂತಹ ಇಲಾಖೆಯ ಶಿಫಾರಸ್ಸಿನ ಔಷಧಿಗಳನ್ನು ಸಿಂಪಡಿಸಬೇಕು. ಅದರಲ್ಲಿ ಕಡಿಮೆ ಮಟ್ಟದಲ್ಲಿ ಈ ರೋಗ ತೋಟದಲ್ಲಿ ಕಾಣಿಸಿದರೆ ಸಾಫ್ ಎಂಬ ಶಿಲೀಂಧ್ರ ನಾಶಕವನ್ನು ಬಳಸುವುದು ಮತ್ತು ಮಿಸ್ಟರ್ ಪ್ರೋ ಎಂಬ ಜೈವಿಕ ಗೊಬ್ಬರವನ್ನು ಕೂಡ ಬಳಸಿ ರೋಗವನ್ನು ಹತೋಟಿಗೆ ತರಬಹುದು ಎಂದರು.

ಜಿಪಂನ ರೇಷ್ಮೆ ಇಲಾಖೆ ಉಪನ್ಯಾಸಕ ಸುಂದರ್ ರಾಜ್ ಮಾತನಾಡಿ, ಇಲಾಖೆ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಕಾಲಕಾಲಕ್ಕೆ ಸರಿಯಾದ ಮಾಹಿತಿ ಮತ್ತು ರೈತರಿಗೆ ದೊರೆಯುವಂಥ ಅನುದಾನಗಳನ್ನು ಒದಗಿಸುವ ಭರವಸೆ ನೀಡಿದರು.

ಹಲಗೂರು ಮತ್ತು ಹಲಸಹಳ್ಳಿ ವ್ಯಾಪ್ತಿಯಲ್ಲಿ ರೈತರ ಸಂಖ್ಯೆ ಜಾಸ್ತಿ ಇರುವುದರಿಂದ ನಾವು ಮಳವಳ್ಳಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅನುದಾನವನ್ನು ಬಿಡುಗಡೆ ಮಾಡಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಹಲಗೂರು ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಸ್.ವಿ.ನರಸಿಂಹಮೂರ್ತಿ, ಇಲಾಖೆಯ ನರೇಗಾ ಮತ್ತು ಜಿಪಂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ರೈತರಿಗೆ ರೋಗದ ಬಗ್ಗೆ ವಿವರಿಸಿ, ಅವುಗಳಿಗೆ ಔಷಧಿ ಬಳಸುವ ರೀತಿಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲಸಹಳ್ಳಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕರಾದ ನವೀನ್ ಕುಮಾರ್, ಮೈಸೂರು ರೇಷ್ಮೆ ನಿರೀಕ್ಷಕ ಬಿ.ಆರ್.ಕಿರಣ್, ಸಿಎಸ್ಆರ್‌ಟಿಐ ಪ್ರಾಜೆಕ್ಟ್ ಅಸಿಸ್ಟೆಂಟ್ ಸಹನಾ ಸೇರಿದಂತೆ ಸ್ಥಳೀಯ ರೈತರು ಪಾಲ್ಗೊಂಡಿದ್ದರು.