ಪಟ್ಟಣದ ಸಿದ್ದಸಿರಿ ಎಥೆನಾಲ್ ಪವರ್ ಘಟಕದ ನಂಬಿಕೆಯಿಂದ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ರೈತರು ಅತಿ ಹೆಚ್ಚು ಕಬ್ಬು ಬೆಳೆದಿದ್ದಾರೆ. ಆದರೆ, ಸಕ್ಕರೆ ಉತ್ಪಾದನೆ ಬದಲಿಗೆ ಕೇವಲ ಎಥೆನಾಲ್ ಉತ್ಪಾದನೆ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರ ಈ ಸಂಕಷ್ಟಕ್ಕೆ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಶಾಸಕ ಡಾ. ಅವಿನಾಶ್ ಜಾಧವ್ ಅವರೇ ನೇರ ಹೊಣೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಥೋಡ್ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಉಪಚುನಾವಣೆ ಮತ್ತು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿರುವುದಾಗಿ ಬಿಜೆಪಿ ನಾಯಕರು ಸುಳ್ಳು ಹೇಳಿದ್ದರು. ಆದರೆ, ವಿಜಯಪುರದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದ ಈ ಘಟಕದಲ್ಲಿ ಒಂದು ಕೆಜಿ ಸಕ್ಕರೆಯೂ ಉತ್ಪಾದನೆಯಾಗುತ್ತಿಲ್ಲ. ಸಕ್ಕರೆ ಉತ್ಪಾದಿಸದ ಕಾರ್ಖಾನೆ ನಾಯಿ ಮೊಲೆಯಲ್ಲಿ ಹಾಲು ಇದ್ದಂತೆ ಎಂದು ಟೀಕಿಸಿದರು.

​ಚಿಂಚೋಳಿಯಲ್ಲಿ 2,190 ಹೆಕ್ಟೇರ್ ಹಾಗೂ ಕಾಳಗಿಯಲ್ಲಿ 1,500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಬ್ಬು ಖರೀದಿಸದಂತೆ ಕೇಂದ್ರ ಸರ್ಕಾರದ ಆದೇಶವಿದ್ದು, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಮಾಜಿ ಸಂಸದರು ಹಾಗೂ ಶಾಸಕರು ಕೇಂದ್ರದ ಮೇಲೆ ಒತ್ತಡ ಹೇರಿ ಆದೇಶ ಮಾರ್ಪಾಡು ಮಾಡಿಸಬೇಕು ಎಂದು ಒತ್ತಾಯಿಸಿದರು.

ರೈತರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ತರಲಾಗಿದ್ದು, ಕಬ್ಬು ಸಾಗಾಟ ಮತ್ತು ಖರೀದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಳೆ ಅಭಾವದಿಂದ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆಯಾದಾಗ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ನದಿಗೆ ನೀರು ಹರಿಸಲಾಗಿದೆ. ಆದರೆ ಗ್ರಾಮಗಳಿಗೆ ಭೇಟಿ ನೀಡದ ಶಾಸಕರು ತಾವೇ ನೀರು ಬಿಡಿಸಿದ್ದಾಗಿ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಹಾಗೂ ಹೊಸ ಬೋರ್‌ವೆಲ್‌ಗಳಿಗೆ ಸೂಚಿಸಲಾಗಿದೆ. ಕೆಕೆಆರ್‌ಡಿಬಿ ಮೂಲಕ ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ ಎಂದು ತಿಳಿಸಿದರು.

​ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಮಲ್ಲಿ, ಅನಿಲ್ ಕುಮಾರ್ ಜಮಾದಾರ್, ಶರಣು ಪಾಟೀಲ್ ಮೋತಕಪಳ್ಳಿ, ಜಗನ್ನಾಥ್ ಕಟ್ಟಿ, ಆನಂದ ಟೈಗರ್, ಲಕ್ಷ್ಮಣ ಆವಂಟಿ, ಜಗನ್ನಾಥ್ ಗುತ್ತೇದಾರ್, ನಾಗೇಶ್ ಗುಣಾಜಿ, ಸುದರ್ಶನರೆಡ್ಡಿ, ಮಹ್ಮದ್ ಹಾದಿ, ಸಂತೋಷ್ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.