ಟ್ರ್ಯಾಕ್ಟರ್ ಸಾಲ ನೀಡುವಾಗ ರೈತರಿಗೆ ಮೋಸ: ಕ್ರಮಕ್ಕೆ ನಂದಿಹಾಳ ಆಗ್ರಹ

| Published : Feb 06 2024, 01:32 AM IST / Updated: Feb 06 2024, 03:05 PM IST

ಟ್ರ್ಯಾಕ್ಟರ್ ಸಾಲ ನೀಡುವಾಗ ರೈತರಿಗೆ ಮೋಸ: ಕ್ರಮಕ್ಕೆ ನಂದಿಹಾಳ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಟ್ರ್ಯಾಕ್ಟರ್ ಸಾಲ ಪಾವತಿಗೆ ನ್ಯಾಯಾಲಯದಿಂದ ಮಹೀಂದ್ರಾ ಫೈನಾನ್ಸ್‌ನವರು ಹೊರಡಿಸಿದ ವಾರೆಂಟ್‌ನ್ನು ಖಂಡಿಸಿ ಬ್ಯಾಂಕ್‌ಗಳ ವಿರುದ್ಧ ರೈತ ಸಂಘದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್, ಮಹೇಂದ್ರ ಫೈನಾನ್ಸ್‌ಗಳು ರೈತರಿಗೆ ಸಾಲ ನೀಡುವಾಗ ಭಾರಿ ಮೋಸ ಮಾಡುತ್ತಿದ್ದು ಈ ಬಗ್ಗೆ ಸಂಬಂಧಿಸಿದವರು ಸೂಕ್ತ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಆಗ್ರಹಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹೇಂದ್ರ ಟ್ರ್ಯಾಕ್ಟರ್ 575ಗೆ 6,59,644 ದರವಿದೆ. ಮಹೇಂದ್ರಾ ಫೈನಾನ್ಸ್‌ನವರು ರೈತರಿಗೆ ಟ್ರ್ಯಾಕ್ಟರ್ ನೀಡುವಾಗ 9 ಲಕ್ಷಕ್ಕೂ ಅಧಿಕ ಸಾಲ ಮಂಜೂರಿ ಮಾಡಿ ಟ್ರ್ಯಾಕ್ಟರ್‌ ನೀಡುತ್ತಾರೆ. 

ಸಾಲ ಪಡೆದ ರೈತರು ನಿಗದಿತ ಅವಧಿಯಲ್ಲಿ ನಿಗದಿಪಡಿಸಿದ ಕಂತಿನ ಹಣ ಪಾವತಿ ಮಾಡುತ್ತಾರೆ. ಆದರೆ ರೈತರಿಂದ ಮುಂಗಡ ಪಡೆದ ಹಣಕ್ಕೆ ಯಾವುದೇ ದಾಖಲೆ ನೀಡದೆ ವಂಚನೆ ಮಾಡುತ್ತಾರೆ. ಅನಕ್ಷರಸ್ಥ ರೈತರಿಗೆ ಭಾರಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೆ ಆನಾಹೊಸೂರಿನ ರೈತ ಬಸವರಾಜ ಮಹೇಂದ್ರಾ ಫೈನಾನ್ಸ್‌ನಲ್ಲಿ ಸಾಲ ಪಡೆದು ಮರು ಪಾವತಿ ಮಾಡಿದ್ದು ಕೊನೆಯ ಕಂತು ಬಾಕಿ ಇದೆ. ಆದರೆ ಸಾಲ ವಸೂಲಿಗೆ ಬ್ಯಾಂಕ್‌ನಿಂದ ರೈತರಿಗೆ ವಾರೆಂಟ್ ನೋಟಿಸ್‌ ಕಳುಹಿಸಿದ್ದಾರೆ. ನ್ಯಾಯಾಲಯಕ್ಕೆ ಗೈರು ಹಾಜರಿಯಾದರೆ ಬಂಧನದ ವಾರೆಂಟ್ ಹೊರಡಿಸುತ್ತಾರೆ. 

ಬರಗಾಲದಿಂದ ತತ್ತರಿಸಿರುವ ರೈತರಿಗೆ ಸಾಲ ಮರು ಪಾವತಿ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸರ್ಕಾರ ರೈತರ ವಿರುದ್ಧ ಬ್ಯಾಂಕ್, ಲೇವಾದೇವಿ, ಸಂಸ್ಥೆ, ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ವಾರೆಂಟ್, ನೋಟಿಸ್‌, ಬಂಧನದ ವಾರೆಂಟ್ ನೀಡಬಾರದೆಂದು ಅಧಿಸೂಚನೆ ಹೊರಡಿಸಿದೆ. ಆದರೂ ಮಹೇಂದ್ರಾ ಫೈನಾನ್ಸ್‌ನವರು ನ್ಯಾಯಾಲಯದಿಂದ ವಾರೆಂಟ್ ಹೊರಡಿಸಿದ್ದಾರೆ ಎಂದು ದಾಖಲೆ ತೋರಿಸಿದರು.

ಕೂಡಲೇ ಐಸಿಐಸಿ ಬ್ಯಾಂಕ್, ಮಹೇಂದ್ರ ಫೈನಾನ್ಸ್, ಎಚ್‌ಡಿಎಫ್ಸಿ ಬ್ಯಾಂಕ್ ಸೇರಿದಂತೆ ಹಣಕಾಸು ಲೇವಾದೇವಿ ಸಂಸ್ಥೆಗಳು ರೈತರಿಗೆ ಮನಸೋ ಇಚ್ಚೇ ಸಾಲ ನೀಡಿ ವಸೂಲಿಗೆ ನಿಯಮ ಬಾಹಿರ ಮಾರ್ಗಗಳ ಅನುಸರಿಸುತ್ತಾರೆ. ಮೂಲ ಬೆಲೆಗಿಂತ ಹೆಚ್ಚಿನ ಹಣಕ್ಕೆ ಟ್ರ್ಯಾಕ್ಟರ್ ಮಾರಾಟ ಮಾಡಿ, ಈಗ ಸಾಲ ವಸೂಲಿಗೆ ರೈತರಿಗೆ ಕಿರುಕುಳ ನೀಡುತ್ತಾರೆ.

ರೈತರಿಗೆ ನೀಡುವ ಟ್ರ್ಯಾಕ್ಟರ್ ಸಾಲದಲ್ಲಿ ಮಹೇಂದ್ರಾ ಫೈನಾನ್ಸ್‌ನವರು ಭಾರಿ ಮೋಸ ಮಾಡುತ್ತಿದ್ದು ಸಮಗ್ರ ತನಿಖೆ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದೇ ಹೋದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರೊಂದಿಗೆ ಬೀದಿ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.