ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಡಿ.೩೧ ರಂದು ಮೈಸೂರಲ್ಲಿ ರೈತ ದಿನಾಚರಣೆ ಅಂಗವಾಗಿ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಡಿ.೩೧ ರಂದು ಮೈಸೂರು ಕಲಾ ಮಂದಿರದಲ್ಲಿ ರೈತ ಸಮಾವೇಶ ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಂದಾಯ, ಕೃಷಿ, ಅರಣ್ಯ, ಸಕ್ಕರೆ ಸಚಿವರು ಭಾಗವಹಿಸುವರು ಎಂದರು.
ಬೇಡಿಕೆಗಳೇನು?:ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಪ್ರಸಕ್ತ ಸಾಲಿನ ಕಬ್ಬಿಗೆ ಪ್ರತಿ ಟನ್‌ಗೆ 5500 ರು. ಬೆಲೆ ನಿಗದಿ ಪಡಿಸಬೇಕು. ಕಳೆದ ಸಾಲಿನಲ್ಲಿ 950 ಕೋಟಿ ರು. ಕಬ್ಬಿನ ಬಾಕಿ ರೈತರಿಗೆ ತಕ್ಷಣ ಕೊಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ಟಿಸಿಗೆ ಕಂಬ ನೀಡಬೇಕು. ಭತ್ತದ ಬೆಲೆ ಕುಸಿತವಾಗಿದ್ದು ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ಎಂಎಸ್ ರಾಜ್ಯ ಸರ್ಕಾರ 500 ರು. ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು.
ರೈತರ ಆಸ್ತಿಗಳ ಮೇಲೆ ವಕ್ಫ್ ಎಂದಿರುವ ದಾಖಲೆ ರದ್ದುಗೊಳಿಸಿ ಉಳುವ ರೈತನಿಗೆ ಭೂಮಿ ಒಡೆತನದ ಹಕ್ಕಿನ ದಾಖಲೆ ಸರಿಪಡಿಸಬೇಕು. ಬಿಪಿಎಲ್ ಕಾರ್ಡ್ ರದ್ಧತಿ ಕೈಬಿಡಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಹೊಂದುವ ರೈತರ ಕುಟುಂಬಕ್ಕೆ ವೈಜ್ಞಾನಿಕ ಬೆಳೆ ನಷ್ಟ ನೀಡಬೇಕು. ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸಿ ಸಾಗುವಳಿ ಚೀಟಿ ನೀಡಬೇಕು. ಕೆಐಡಿಬಿ ಮೂಲಕ ರೈತರ ಭೂಮಿ ವಶಪಡಿಸಿಕೊಂಡು ಅಭಿವೃದ್ಧಿಪಡಿಸಿ ಬಂಡವಾಳ ಶಾಹಿಗಳಿಗೆ ನೀಡುವ ಬದಲು, ರೈತರಿಗೆ ಜಂಟಿ ಮಾಲೀಕತ್ವ ಸೃಷ್ಟಿಸಬೇಕು. ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಒತ್ತಾಯಿಸಿದರು.ರಾಜ್ಯದ ಮಹದಾಯಿ ಮತ್ತು ಮೇಕೆದಾಟು ಯೋಜನೆಯನ್ನು ತಕ್ಷಣ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.ಖಾಸಗಿ ಫೈನಾನ್ಸ್ ಗಳ ಹಾವಳಿ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿದೆ. ಸರ್ಕಾರ ಮಧ್ಯಪ್ರವೇಶಿಸಿ ರೈತರು ಮತ್ತು ರೈತ ಮಹಿಳೆಯರನ್ನು ರಕ್ಷಿಸಬೇಕು. ಆನ್‌ಲೈನ್ ಗೇಮಿನಿಂದ ರೈತರು ಹಾಗೂ ರೈತ ಮಕ್ಕಳು ರೈತ ಕುಟುಂಬ ಬೀದಿಗೆ ಬಂದಂತಾಗಿದ್ದು,ಕೂಡಲೇ ಆನ್ ಲೈನ್ ಗೇಮ್ ನಿಲ್ಲಿಸಬೇಕು.ರಾಜ್ಯದಲ್ಲಿ ವಿದ್ಯಾನಿಧಿ ಯೋಜನೆ ಮುಂದುವರಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುತ್ತದೆ ಎಂದರು.
ರಾಜ್ಯದ ರೈತರು ಸ್ವಯಂ ಪ್ರೇರಿತರಾಗಿ ಮೈಸೂರಿನಲ್ಲಿ ಡಿ.೩೧ ರಂದು ನಡೆವ ರೈತ ಸಮಾವೇಶಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಎಂದು ಮನವಿ ಮಾಡಿದರು. ಶ್ರೀನಿವಾಸ್, ಕೆರೆಹುಂಡಿರಾಜಣ್ಣ, ಕೋಟೆಕೆರೆ ಮಹದೇವ ನಾಯಕ, ಕುರಹಟ್ಟಿಗುರುಸ್ವಾಮಿ, ಯಡವನಹಳ್ಳಿಗೋವಿನಾಯಕ, ಮಹದೇವಯ್ಯ, ಬೆಳೆಚಲವಾಡಿ ಶ್ರೀನಿವಾಸ್, ಸಿದ್ದರಾಜು, ನಟರಾಜ್ ಹಾಜರಿದ್ದರು.