ಸಾರಾಂಶ
-ರೈತರ ಹಿಡಿಶಾಪ
------ರಸ್ತೆ ಸರಿಪಡಿಸಿಕೊಡಲು ಜನಪ್ರತಿನಿಧಿಗಳಿಗೆ ಬೇಡಿಕೆ ಇಟ್ಟಿದ್ದ ರೈತರು । ಕಿವಿಗೊಡದ ಇಲಾಖೆ । ನಿದ್ರಾವಸ್ಥೆಯಲ್ಲಿ ಜನಪ್ರತಿನಿಧಿಗಳು
---------ಕನ್ನಡಪ್ರಭ ವಾರ್ತೆ ಹಿರಿಯೂರು:
ಉಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತ್ರಿಕೇನಹಳ್ಳಿಯಲ್ಲಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗುವ ದಾರಿಯನ್ನು ತಾವೇ ಸರಿಪಡಿಸಿಕೊಂಡಿದ್ದಾರೆ.ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಇಲಾಖೆಗೆ ರೈತರು ಹಿಡಿಶಾಪ ಹಾಕಿದ್ದಾರೆ. ಹಿರಿಯೂರು ಮತ್ತು ವಿವಿಪುರ ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ಸುಮಾರು ನೂರಾರು ರೈತರ ಸಾವಿರಾರು ಎಕರೆ ಜಮೀನುಗಳಿಗೆ ಹೋಗುವ ಈ ರಸ್ತೆಯಲ್ಲಿ ಪ್ರತಿನಿತ್ಯ ರೈತರ ವಾಹನಗಳು ಕೂಲಿ ಕಾರ್ಮಿಕರು ಓಡಾಡುತ್ತಾರೆ. ರೈತರು ಬೆಳೆದ ಹೂವು, ಹಣ್ಣು, ತರಕಾರಿ ವಸ್ತುಗಳನ್ನು ನಗರಕ್ಕೆ ಸಾಗಿಸುವ ಪ್ರಧಾನ ರಸ್ತೆಗೆ ಇದು ಕೂಡಿಕೊಳ್ಳುತ್ತದೆ. ಸುಮಾರು ವರ್ಷಗಳಿಂದಲೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ರಸ್ತೆ ಸರಿಪಡಿಸಿಕೊಡಲು ಬೇಡಿಕೆ ಇಟ್ಟಿದ್ದರು ಸಹ ಕಿವಿಗೊಡದ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ನಿದ್ರಾವಸ್ಥೆಯಲ್ಲಿರುವುದನ್ನು ಕಂಡು ರೈತರೇ ತಮ್ಮ ರಸ್ತೆಯನ್ನು ಸ್ವತ: ಸರಿಪಡಿಸಿಕೊಂಡಿದ್ದಾರೆ.
ರಸ್ತೆ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾತ್ರಿಕೇನಹಳ್ಳಿ ಮಂಜುನಾಥ್, ನಾವು ಕೇವಲ ಜನಪ್ರತಿನಿಧಿಗಳಿಗೆ ಮತ ಚಲಾಯಿಸುವುದಕ್ಕೆ ಮಾತ್ರ ಬೇಕಾಗಿದ್ದೇವೆ. ನಮ್ಮ ಸಮಸ್ಯೆಗಳನ್ನು ಈಡೇರಿಸುವುದಕ್ಕೆ ಅವರಿಗೆ ಸಮಯವಿಲ್ಲ ಎಂಬುದನ್ನು ಮನಗಂಡು ರೈತರು ಸ್ವಂತ ಖರ್ಚಿನಲ್ಲಿ ಎರಡು ಜೆಸಿಬಿ ವಾಹನ ಮತ್ತು 10 ಟ್ರ್ಯಾಕ್ಟರ್ ಬಳಸಿಕೊಂಡು ರಸ್ತೆ ಸರಿಪಡಿಸಿಕೊಳ್ಳುತ್ತಿದ್ದಾರೆ.ದುರಸ್ತಿಗೂ ಮುನ್ನ ಈ ರಸ್ತೆಯಲ್ಲಿ ಕೂಲಿ ಕಾರ್ಮಿಕರಿಗೆ ಅಪಘಾತಗಳಾಗಿ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ನಮ್ಮ ಕೂಗು ಯಾರಿಗೂ ಮುಟ್ಟುತ್ತಿಲ್ಲ ಎನ್ನುವುದನ್ನು ಮನಗಂಡು ರೈತರೇ ರಸ್ತೆ ಸರಿಪಡಿಸಿಕೊಂಡಿದ್ದಾರೆ ಎಂದರು.
-------ಫೋಟೊ: 1,2
ಹಿರಿಯೂರು ತಾಲೂಕಿನ ಕಾತ್ರಿಕೇನಹಳ್ಳಿಯ ರೈತರು ತಮ್ಮ ಜಮೀನುಗಳಿಗೆ ಹೋಗುವ ರಸ್ತೆಯನ್ನು ತಾವೇ ತಮ್ಮ ಖರ್ಚಿನಲ್ಲಿಯೇ ಸರಿಪಡಿಸಿಕೊಂಡಿರುವುದು.