ಸಾರಾಂಶ
ಡಿ. 27ರಂದು ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ನಡೆಯಲಿರುವ ರೈತ ದಿನಾಚರಣೆ, ರೈತರ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮ ಆಗಿದೆ. ರೈತರನ್ನು ಒಗ್ಗೂಡಿಸುವ ಕಾರ್ಯ ಇದಾಗಿದೆ. ಜಿಲ್ಲೆಯ ಹಳ್ಳಿ, ಹಳ್ಳಿಗೆ ತೆರಳಿ ಸಮಾವೇಶದ ಬಗ್ಗೆ ತಿಳಿಯಪಡಿಸುತ್ತಿರುವುದು ಉತ್ತಮ ಕೆಲಸವಾಗಿದೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ದೇಶದ ಬೆನ್ನೆಲುಬಾಗಿರುವ ರೈತರನ್ನು ಸನ್ಮಾನಿಸುವ ಕಾರ್ಯಕ್ರಮ ವಿಜಯನಗರ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವುದು ಉತ್ತಮ ಆಲೋಚನೆಯಾಗಿದೆ. ರೈತರು ಇಲ್ಲದಿದ್ದರೆ ಈ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗಲಿದೆ. ಹಾಗಾಗಿ ಪ್ರತಿಯೊಬ್ಬರೂ ರೈತಪರ ನಿಲುವು ಹೊಂದಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್‌ಎನ್‌ಎಫ್ ಮಹಮ್ಮದ್ ಇಮಾಮ್ ನಿಯಾಜಿ ತಿಳಿಸಿದರು.ನಗರದ ಅಮರಾವತಿ ಅತಿಥಿ ಗೃಹದಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ವಾಸುದೇವ ಮೇಟಿ ಬಣ)ದ ವತಿಯಿಂದ ಡಿ. 27ರಂದು ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ನಡೆಯಲಿರುವ ರೈತ ದಿನಾಚರಣೆ, ರೈತರ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮ ಆಗಿದೆ. ರೈತರನ್ನು ಒಗ್ಗೂಡಿಸುವ ಕಾರ್ಯ ಇದಾಗಿದೆ. ಜಿಲ್ಲೆಯ ಹಳ್ಳಿ, ಹಳ್ಳಿಗೆ ತೆರಳಿ ಸಮಾವೇಶದ ಬಗ್ಗೆ ತಿಳಿಯಪಡಿಸುತ್ತಿರುವುದು ಉತ್ತಮ ಕೆಲಸವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಲಿ. ಸರ್ಕಾರಗಳ ಸೌಲಭ್ಯಗಳ ಬಗ್ಗೆಯೂ ರೈತರಿಗೆ ಅರಿವು ಮೂಡಿಸುವ ಕಾರ್ಯ ಆಗಲಿ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪಮಾತನಾಡಿ, ಜಿಲ್ಲೆಯಲ್ಲಿ ರೈತ ದಿನಾಚರಣೆ ನಿಮಿತ್ತ ಸಮಾವೇಶ ಮಾಡಲಾಗುತ್ತಿದೆ. ಈಗಾಗಲೇ ಆಮಂತ್ರಣ ಪತ್ರಿಕೆ ಕೂಡ ಸಿದ್ಧವಾಗಿದೆ. ರೈತರಲ್ಲಿ ಈ ಸಮಾವೇಶದ ಉದ್ದೇಶ ಹಾಗೂ ಮಹತ್ವದ ಬಗ್ಗೆ ತಿಳಿಯಪಡಿಸಲು ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಜಿಲ್ಲಾದ್ಯಂತ ಸಮಾವೇಶದ ಬಗ್ಗೆ ಪ್ರಚಾರ ಮಾಡಲಾಗುವುದು. ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಸಂಘದ ಗೌರವಾಧ್ಯಕ್ಷ ವೆಂಕೋಬಪ್ಪ, ಜಿಲ್ಲಾ ಉಪಾಧ್ಯಕ್ಷ ಜಂಬಯ್ಯ, ಖಜಾಂಚಿ ಹನುಮಂತ, ತಾಲೂಕು ಕಾರ್ಯದರ್ಶಿ ನಾಗರಾಜ, ಮುಖಂಡರಾದ ಸರಳಾ ಕಾವ್ಯ, ಫಕ್ಕೀರಪ್ಪ, ಸ್ವಾಮಿ, ಮಹೇಶ್ ಮತ್ತಿತರರಿದ್ದರು.