ಕನ್ನಡಪ್ರಭ ವಾರ್ತೆ ಬೇಲೂರು
ಬಗರ್ ಹುಕುಂ, ಬರಪೀಡಿತ ಪ್ರದೇಶ ಹಾಗೂ ಕಾಡಾನೆಗಳ ಶಾಶ್ವತ ಪರಿಹಾರಕ್ಕೆ ರೈತರು ಕೇವಲ ಪ್ರತಿಭಟನೆ ನಡೆಸಿದರೆ ಸರ್ಕಾರದ ಗಮನಕ್ಕೆ ಬರುವುದಿಲ್ಲ. ನಿಮ್ಮ ಕೂಗು ವಿಧಾನಸೌಧ ಮುಟ್ಟಿದರೆ ಮಾತ್ರ ಸಂಬಂಧಪಟ್ಟ ಸಚಿವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ನಡೆದ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ಪಾಲ್ಗೊಂಡು ಮಾತನಾಡಿದ ಅವರು, ಬಗರ್ ಹುಕುಂ, ಬರಪೀಡಿತ ಪ್ರದೇಶ ಹಾಗೂ ಕಾಡಾನೆಗಳ ಶಾಶ್ವತ ಪರಿಹಾರಕ್ಕೆ ರೈತ ಸಂಘದ ಜೊತೆ ತೆರಳಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಾನು ಸಿದ್ಧ ಎಂದು ಭರವಸೆ ನೀಡಿದರು.
ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರ ಹಾಗೂ ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕ ಎಚ್ ಕೆ ಸುರೇಶ್ ವಿರುದ್ಧಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿತ್ತು. ಸೋಮವಾರ ಮಧ್ಯಾಹ್ನದಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಡಾರ ಹೂಡಿದ ರೈತ ಸಂಘದವರು ರಾತ್ರಿಪೂರ ಜಾಗರಣೆ ನಡೆಸಿ ಅದೇ ಸ್ಥಳದಲ್ಲಿ ಅಡುಗೆ ಮಾಡಿ ಅಹೋರಾತ್ರಿ ಧರಣಿ ನಡೆಸಿದ್ದರು. ರೈತರ ಮನವಿಗೆ ಸ್ಪಂದಿಸಿದ ಶಾಸಕ ಸುರೇಶ್ ಮಂಗಳವಾರ ಭೇಟಿ ನೀಡಿ ರೈತ ಮನವಿ ಆಲಿಸಿದರು.
ಜೋಳಕ್ಕೆ ಬಿಳಿ ಸುಳಿ ರೋಗ:
ತಾಲೂಕು ರೈತ ಸಂಘದ ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ ಜೋಳಕ್ಕೆ ಬಿಳಿ ಸುಳಿ ರೋಗ ಹರಡಿ ಸಂಪೂರ್ಣ ಬೆಳೆ ಹಾಳಾಗುತ್ತಿದ್ದರು ಸರ್ಕಾರ ಪರಿಹಾರ ನೀಡುತ್ತಿಲ್ಲ. ಹಳೇಬೀಡು ಮಾದಿ ಹಳ್ಳಿ ಏತ ನೀರಾವರಿ ಕಾಲುವೆಯಲ್ಲಿ ಹೂಳನ್ನು ತೆಗೆಯದೆ ನೀರನ್ನು ಬಿಟ್ಟಿರುವುದು ಬೆಳೆಗಳ ರೋಗಕ್ಕೆ ಕಾರಣವಾಗಿದೆ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ರೈತರ ಸಂಕಷ್ಟ ಪರಿಹಾರ ಮಾಡಲು ಶಾಸಕರು ಮುಂದಾಗಬೇಕು ಎಂದರು.
2,000 ರೈತರು ಬೀದಿ ಪಾಲು :ಜಿಲ್ಲಾ ರೈತ ಸಂಘದ ಕಾರ್ಯದರ್ಶಿಸ್ವಾಮಿ ಗೌಡ ಮಾತನಾಡಿ, ಬೇಲೂರು ತಾಲೂಕಿನಲ್ಲಿ 2004ರಿಂದ ಈಚೆಗೆ ಸುಮಾರು ಐವತ್ತು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ರೈತರ ಜಮೀನನ್ನು ಮತ್ತೆ ಸರ್ಕಾರ ವಶಪಡಿಸಿಕೊಳ್ಳಲು ಹವಣಿಸುತ್ತಿರುವುದು ತಪ್ಪು ನಿರ್ದಾರ. ಸರ್ಕಾರದ ಈ ನಿರ್ಧಾರದಿಂದ 2,000ಕ್ಕೂ ಹೆಚ್ಚು ರೈತರು ಬೀದಿ ಪಾಲಾಗುವ ಆತಂಕವಿದೆ. ಬಗರ್ ಹುಕುಂ ಸಾಗುವಳಿ ಚೀಟಿ ಹಾಗೂ ಪಹಣಿ ಹೊಂದಿರುವ ರೈತರನ್ನು ಅವರ ಭೂಮಿಯಲ್ಲಿ ಉಳುಮೆ ಮಾಡಲು ಬಿಡಬೇಕು ಎಂದು ಒತ್ತಾಯಿಸಿದರು.
ಶಾಸಕ ಎಚ್.ಕೆ. ಸುರೇಶ್ ಮಾತನಾಡಿ ಮಾಜಿ ಶಾಸಕರಾದ ರುದ್ರೇಶ್ ಗೌಡರು ಹಾಗೂ ಕೆ.ಎಸ್. ಲಿಂಗೇಶ್ ಮತ್ತು ತಾವು ಸೇರಿ ಯಾರು ಕೂಡ ತಮ್ಮ ಸ್ವಂತ ಬಂಧು ಬಳಗಕ್ಕೆ ಸಾಗುವಳಿ ಚೀಟಿ ನೀಡಿಲ್ಲ. ಆದರೂ ಕೆಲವು ಕಾನೂನು ತೊಡಕುಗಳಿಂದ ಸಮಸ್ಯೆ ಉಂಟಾಗಿದೆ. ಈಗ ಕಾನೂನು ಚೌಕಟ್ಟಿನಲ್ಲಿ ಈ ಪ್ರಕರಣ ಇರುವುದರಿಂದ ಈ ಬಗ್ಗೆ ಸಂಬಂಧಪಟ್ಟ ರೈತರೊಂದಿಗೆ ನಿಯೋಗ ತೆರಳಿ ಕಂದಾಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸುವುದಾಗಿ ಹೇಳಿದರು.ನಮ್ಮ ತಾಲೂಕು ಮಲೆನಾಡು, ಅರೇಮಲೆನಾಡು, ಬಯಲು ಸೀಮೆ ಮೂರು ಭಾಗದಲ್ಲಿ ಇರುವುದರಿಂದ ಕಂದಾಯ ಅಧಿಕಾರಿಗಳು ಬರಪೀಡಿತ ಪ್ರದೇಶವನ್ನು ಗುರುತಿಸುವಾಗ ಇಡೀ ತಾಲೂಕನ್ನು ಮೌಲ್ಯಮಾಪನ ಮಾಡದೆ ಹೋಬಳಿವಾರು ಗಣನೆಗೆ ತೆಗೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ರಾಜ್ಯದಲ್ಲೇ ಪ್ರಥಮವಾಗಿ ತಾವು ಬಯಲುಸೀಮೆಯ ಮಳೆ ಅಭಾವದಿಂದ ಬೆಳೆ ನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ಕೊರತೆಯಿಂದ ರೈತರ ಬೆಳೆ ನಷ್ಟವಾಗಿದ್ದು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ರೈತರ ಜೊತೆಗೂಡಿ ತಾವು ಕೂಡ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ರೈತರು ರೊಚ್ಚಿಗೇಳಬೇಕು :ಜಿಲ್ಲೆಯಲ್ಲಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಮುಂದುವರೆದಿದ್ದು ಬೆಳೆ ನಷ್ಟದ ಜೊತೆ ಜನರೂ ಬಲಿಯಾಗುತ್ತಿದ್ದಾರೆ. ಈ ಹಿಂದೆ ವಿಧಾನಸಭಾ ಅಧಿವೇಶನಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿ ಅರಣ್ಯ ಮಂತ್ರಿಗಳನ್ನು ಕೂಡ ತಾಲೂಕಿಗೆ ಕರೆಸಿ ರೈತರೊಂದಿಗೆ ಸಂವಾದ ನಡೆಸಿದ್ದೇನೆ. ಆದರೆ ನನಗೆ ತಿಳಿದ ಮಟ್ಟಿಗೆ ಇದರಿಂದ ಯಾವುದೇ ಪರಿಹಾರ ಸರ್ಕಾರದಿಂದ ಸಿಗುತ್ತಿಲ್ಲ. ಕಾಡಾನೆಗಳ ಸಮಸ್ಯೆ ಬಗ್ಗೆ ರೈತರು ರೊಚ್ಚಿಗೆದ್ದರೆ ಮಾತ್ರ ಸರ್ಕಾರದಿಂದ ನಿರ್ದಿಷ್ಟ ಹಾಗೂ ಶಾಶ್ವತ ಪರಿಹಾರ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ತಾವು ಕೂಡ ರೈತರೊಂದಿಗೆ ಹೋರಾಟ ಮಾಡಲು ಸಿದ್ಧ ಎಂದು ಆಶ್ವಾಸನೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಬಸವರಾಜ್, ಶ್ರೀನಿವಾಸ್, ಬಿರಾಟೆಮನೆ ಸುರೇಶ್, ಲೋಕೇಶ್, ಕುಮಾರ್, ಮಲ್ಲಿಕಾ, ಮುಂತಾದವರಿದ್ದರು.