ರೈತರ ಬೆಳೆ ವಿಮೆ ಮೊತ್ತ ಮಧ್ಯವರ್ತಿಗಳ ಪಾಲಾಗಬಾರದು: ನೇಮರಾಜ ನಾಯ್ಕ

| Published : Jun 22 2025, 01:18 AM IST

ಸಾರಾಂಶ

ಕೊಟ್ಟೂರು ತಾಪಂ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಕೊಟ್ಟೂರು ತಾಲೂಕು ಮಟ್ಟದ ಅಧಿಕಾರಿಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಶಾಸಕ ಕೆ. ನೇಮರಾಜ ನಾಯ್ಕ ನೇತೃತ್ವದಲ್ಲಿ ನಡೆಯಿತು. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಲಭ್ಯವಾಗುವಂತೆ ಮಾಡಿ ಎಂದು ನೇಮರಾಜ ನಾಯ್ಕ ಸೂಚಿಸಿದರು.

ಕೊಟ್ಟೂರು: ರೈತರ ಬೆಳೆ ವಿಮೆಯ ಮೊತ್ತವನ್ನು ಮಧ್ಯವರ್ತಿಗಳು ದೊರಕಿಸಿಕೊಳ್ಳುತ್ತಿದ್ದು, ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ವಿಮೆ ಕಂಪನಿಗಳ ಸಾಚಾತನವನ್ನು ದೃಢೀಕರಿಸಿಕೊಂಡು ನೇರವಾಗಿ ರೈತರಿಗೆ ತಲುಪುವಂತೆ ಮಾಡಬೇಕು. ಅಲ್ಲದೇ ಮಧ್ಯವರ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಶಾಸಕ ಕೆ. ನೇಮರಾಜ ನಾಯ್ಕ ಸೂಚಿಸಿದರು.

ಗುರುವಾರ ಇಲ್ಲಿನ ತಾಪಂ ಕಾರ್ಯಾಲಯದ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಮಟ್ಟದ ಅಧಿಕಾರಿಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಪೂರ್ವದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ಹಂತದಲ್ಲಿ ತೊಂದರೆ ಉಂಟಾಗದಂತೆ ಕೃಷಿ ಅಧಿಕಾರಿಗಳು ರೈತರು ಬಯಸುವ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕೂಡಲೇ ಸಿಗುವಂತೆ ಮಾಡಬೇಕು ಎಂದು ಹೇಳಿದರು.

ತಾಲೂಕು ಎ.ಡಿ. ವಾಮದೇವ ಕೊಳ್ಳಿ ಮಾತನಾಡಿ, ರೈತರಿಗೆ ಯಾವುದೇ ತೊಂದರೆ ಇಲ್ಲದಂತೆ ಬಿತ್ತನೆ ಬೀಜ, ರಸಗೊಬ್ಬರಗಳ ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಿಟ್ಟುಕೊಳ್ಳಲು ಮಾರಾಟಗಾರರಿಗೆ ಈಗಾಗಲೇ ಸೂಚಿಸಲಾಗಿದೆ. ಡಿಎಪಿ ರಸಗೊಬ್ಬರವನ್ನು ರೈತರು ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಅದರ ಕೊರತೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸುವಂತೆ ರೈತರಿಗೆ ಸೂಕ್ತ ಬಗೆಯಲ್ಲಿ ಸೂಚನೆ ನೀಡಲಾಗುತ್ತಿದೆ ಎಂದರಲ್ಲದೆ, ನ್ಯಾನೋ ರಸಗೊಬ್ಬರ ಸೇರಿದಂತೆ ಇತರ ಸಾವಯವ ರಸಗೊಬ್ಬರಗಳನ್ನು ಬಳಸುವಂತೆ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.

ಕೆಡಿಪಿ ಸಭೆಗೆ 27 ಇಲಾಖೆಗಳ ಪೈಕಿ 22 ಇಲಾಖೆಯ ಅಧಿಕಾರಿಗಳು ಬಂದಿದ್ದು, ಸಭೆಗೆ ಬಾರದೇ ಇರುವ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಇಒ ಮತ್ತು ತಹಸೀಲ್ದಾರಗೆ ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ ಜೆಜೆಎಂ ಮಿಷನ್ ಅಡಿ ಕೈಗೆತ್ತಿಕೊಂಡಿರುವ ಕುಡಿಯುವ ನೀರು ಸರಬರಾಜು ಯೋಜನೆ ಯಾವುದೇ ಹಳ್ಳಿಗಳಲ್ಲಿ ಪರಿಪೂರ್ಣವಾಗಿಲ್ಲ. ಹೀಗಿದ್ದರೂ ಎಇಇ ಸೈಟಿಗೆ ಏಕೆ ಹೋಗುತ್ತಿಲ್ಲ ಎಂದು ಶಾಸಕರು ಪಶ್ನಿಸಿದರಲ್ಲದೆ, ಅಪೂರ್ಣಗೊಂಡ ಯೋಜನೆಗಳ ಬಿಲ್‌ನ್ನು ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಸಣ್ಣ ನೀರಾವರಿ ಇಲಾಖೆ 2-3 ವರ್ಷಗಳಿಂದಲೂ ಯಾವುದೇ ಯೋಜನೆ ರೂಪಿಸದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಿಲ್ಲ ಏಕೆ ಎಂದು ಶಾಸಕರು ಸಣ್ಣ ನೀರಾವರಿ ಇಲಾಖೆ ಇಇಯನ್ನು ಪ್ರಶ್ನಿಸಿದರು.

ಶಿಕ್ಷಣ ಇಲಾಖೆಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಯಾವುದೇ ತೊಂದರೆ ಬಾರದಂತೆ 2 ವರ್ಷಗಳಲ್ಲಿ ₹5 ಕೋಟಿ ಅನುದಾನವನ್ನು ನೀಡಿರುವೆ. ಪ್ರಾಥಮಿಕ ಶಾಲೆ ಶಿಕ್ಷಣದ ಕೊಠಡಿಗಳಿಗೆ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗುತ್ತಿದೆ ಎಂದ ಶಾಸಕರು, ಶಾಲಾ ಆವರಣದಲ್ಲಿ ಹೈ ಮಾಸ್ಕ್ ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸಲು ಸಂಬಂಧಪಟ್ಟ ಅನುದಾನವನ್ನು ಸಹ ಬಿಡುಗಡೆ ಮಾಡಿರುವೆ ಎಂದು ಹೇಳಿದರು.

ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಎಸ್. ಕೊಡದಪ್ಪ, ಎ.ಎಂ. ಹಾಲಯ್ಯ, ಪರಸಪ್ಪ, ಎಸ್. ಗಂಗಾಧರಪ್ಪ, ಬುಡೇನ್ ಸಾಬ್, ಡಿ. ದೀಪಾ, ತಹಸೀಲ್ದಾರ್ ಅಮರೇಶ್ ಜಿ.ಕೆ., ತಾಪಂ ಇಒ ಡಾ. ಆನಂದ ಕುಮಾರ್ ಇದ್ದರು.